ಬಿಬಿಎಂಪಿ: ‘ಬೆಂಕಿ’ಗೆ ಅವಸರದ ಪರೀಕ್ಷೆಯೇ ಕಾರಣ; ಆಂತರಿಕ ತನಿಖೆ ಬಹಿರಂಗ
ಇತ್ತೀಚೆಗೆ ಪಾಲಿಕೆಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡ ಘಟನೆಗೆ ಅವಸರದಲ್ಲಿ ಪರೀಕ್ಷೆ ನಡೆಸಲು ಹೆಚ್ಚಿನ ಶಾಖ ನೀಡಿದ್ದೇ ಕಾರಣ ಎಂಬುದು ಬಿಬಿಎಂಪಿಯ ಆಂತರಿಕ ತಾಂತ್ರಿಕ ತನಿಖೆಯಲ್ಲಿ ಪ್ರಾಥಮಿಕವಾಗಿ ತಿಳಿದು ಬಂದಿದೆ.
ಬೆಂಗಳೂರು (ಆ.17) : ಇತ್ತೀಚೆಗೆ ಪಾಲಿಕೆಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ನಡೆದ ಬೆಂಕಿ ಅವಘಡ ಘಟನೆಗೆ ಅವಸರದಲ್ಲಿ ಪರೀಕ್ಷೆ ನಡೆಸಲು ಹೆಚ್ಚಿನ ಶಾಖ ನೀಡಿದ್ದೇ ಕಾರಣ ಎಂಬುದು ಬಿಬಿಎಂಪಿಯ ಆಂತರಿಕ ತಾಂತ್ರಿಕ ತನಿಖೆಯಲ್ಲಿ ಪ್ರಾಥಮಿಕವಾಗಿ ತಿಳಿದು ಬಂದಿದೆ.
ಘಟನೆ ಸಂಬಂಧ ಬಿಬಿಎಂಪಿ ಆಯುಕ್ತರು ನೇಮಿಸಿದ್ದ ಆಂತರಿಕ ತಾಂತ್ರಿಕ ತನಿಖೆ ಮುಖ್ಯಸ್ಥ ಪಾಲಿಕೆ ಎಂಜಿನಿಯಂರಿಂಗ್ ವಿಭಾಗದ ಬಿ.ಎಸ್.ಪ್ರಹ್ಲಾದ್ ಬುಧವಾರ ಬೆಂಕಿ ಅವಘಡ ಸಂಭವಿಸಿದ ಕೊಠಡಿಗೆ ಭೇಟಿ ನೀಡಿ ಒಂದು ಗಂಟೆಗಿಂತ ಹೆಚ್ಚು ಕಾಲ ಪರಿಶೀಲಿಸಿದರು.
ಈ ವೇಳೆ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದ ಸಹಾಯಕ ಎಂಜಿನಿಯರ್ ಆನಂದ್ (ಆರೋಪಿ) ಅವರನ್ನು ಲ್ಯಾಬ್‌ಗೆ ಕರೆದುಕೊಂಡು ಹೋಗಿ, ಘಟನೆ ಸಂಭವಿಸಿದ ವೇಳೆ ಯಾವ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳನ್ನು ಪರೀಕ್ಷೆ ನಡೆಸಲಾಗುತ್ತಿತ್ತು. ಯಾವ ಸಮಯದಲ್ಲಿ ಪರೀಕ್ಷೆ ನಡೆಸಲಾಯಿತು. ಎಷ್ಟುಮಂದಿ ಇದ್ದರು. ಪರೀಕ್ಷೆ ಹೇಗೆ ಮಾಡಲಾಯಿತು. ಯಾಕೆ ಬೆಂಕಿ ಅವಘಡ ಸಂಭವಿಸಿತು ಎಂಬ ಮಾಹಿತಿಯನ್ನು ಕಲೆ ಹಾಕಿದರು. ಘಟನೆ ಬಗ್ಗೆ ಆನಂದ್ ಸಂಪೂರ್ಣವಾಗಿ ವಿವರಗಳನ್ನು ನೀಡಿದ್ದಾರೆ ಎಂದು ಪ್ರಹ್ಲಾದ್ ತಿಳಿಸಿದ್ದಾರೆ.
ಅಗ್ನಿದುರಂತವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಾಖ ಕೊಟ್ಟು ಬಿಟುಮಿನ್(ಡಾಂಬರ್), ಜಲ್ಲಿ ಕಲ್ಲು ಮಿಶ್ರಿತ ಮಾದರಿಯನ್ನು ಬಿಸಿ ಮಾಡುವ ವೇಳೆ ಶಾಖ ಹೆಚ್ಚಾಗಿ ಬಿಟುಮಿನ್, ಬೆಂಜಮಿನ್ ರಾಸಾಯನಿಕಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸಿಬ್ಬಂದಿಯು ಅವಸರದಲ್ಲಿ ಪರೀಕ್ಷೆ ಮಾಡುವುದಕ್ಕೆ ಹೋಗಿರುವುದು ಅನಾಹುತಕ್ಕೆ ಕಾರಣವಾಗಿದೆ ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಬಿ.ಎಸ್.ಪ್ರಹ್ಲಾದ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಸಣ್ಣ ಪೇಪರ್ ತುಂಡು ಸುಟ್ಟಿಲ್ಲ
ಬೆಂಕಿ ಅವಘಡ ಉಂಟಾದ ಕೊಠಡಿಯ ಕೆಳಭಾಗದಲ್ಲಿ ಬಿಟುಮಿನ್ ಮತ್ತು ಕಾಂಕ್ರಿಟ್ ಪರೀಕ್ಷೆ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ. ಅತ್ಯಂತ ಕಡಿಮೆ ಜಾಗ ಹೊಂದಿದೆ. ಘಟನೆ ಸಂಭವಿಸಿದ ಸಂದರ್ಭದಲ್ಲಿ ಬೆಂಜನ್ ರಾಸಾಯನಿಕಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಭಾರೀ ಪ್ರಮಾಣ ಶಾಖ ಹಾಗೂ ಹೊಗೆ ಉತ್ಪತ್ತಿಯಾಗಿದೆ. ಈ ಶಾಖಕ್ಕೆ ಫ್ಯಾನ್‌ಗಳ ಪ್ಲಾಸ್ಟಿಕ್ ರೆಕ್ಕೆಗಳು, ಎಇಡಿ ಲೈನ್‌ನ ಪ್ಲಾಸ್ಟಿಕ್ ಕವಚ, ನೀರಿನ ಪ್ಲಾಸ್ಟಿಕ್ ಬಾಟಲ್‌ಗಳು ಕರಗಿದೆ. ಆದರೆ, ಲ್ಯಾಬ್ ಮೇಲ್ಭಾಗದ ಕಚೇರಿಯಲ್ಲಿನ ಕಡತ, ಪೇಪರ್‌ಗಳಿಗೆ ಬೆಂಕಿ ಹೊತ್ತಿಕೊಂಡಿಲ್ಲ. ಒಂದೇ ಒಂದು ಸಣ್ಣ ಕಾಗದ ತುಂಡು ಸುಟ್ಟಿಲ್ಲ ಎಂದು ಪ್ರಹ್ಲಾದ್ ತಿಳಿಸಿದರು.
ಮತ್ತೆ ಕೊಠಡಿ ಪೊಲೀಸರ ವಶಕ್ಕೆ
ಬೆಂಕಿ ಅವಘಡ ಸಂಭವಿಸಿದ ಬಳಿಕ ಲ್ಯಾಬನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದರು. ಬಿಬಿಎಂಪಿಯ ಆಂತರಿಕ ತನಿಖೆ ಕಾರಣಕ್ಕೆ ಬುಧವಾರ ಕೆಲವು ಗಂಟೆ ಮಾತ್ರ ಲ್ಯಾಬ್ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಿದ್ದರು. ಆಂತರಿಕ ತಾಂತ್ರಿಕ ತನಿಖೆಯ ಮುಗಿಯುತ್ತಿದಂತೆ ಹಲಸೂರು ಗೇಟ್ ಪೊಲೀಸರು ಮತ್ತೆ ಲ್ಯಾಬ್‌ಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಮತ್ತೆ ಅಗತ್ಯವಿದ್ದರೆ, ಪೊಲೀಸರೇ ಆಗಮಿಸಿ ಲ್ಯಾಬ್ ಬಾಗಿಲು ತೆಗೆದು ಬಿಬಿಎಂಪಿಯ ತನಿಖೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಿಬಿಎಂಪಿ ಬೆಂಕಿ ದುರಂತ, ತನಿಖೆಗೂ ಮುನ್ನವೇ ಕಾಂಗ್ರೆಸ್ 'ಬೆಂಕಿ' ಟ್ವೀಟ್!
ಆಂತರಿಕ ತಾಂತ್ರಿಕ ತನಿಖೆಗೆ ಅಧಿಕಾರಿಗಳ ತಂಡ ರಚನೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಲ್ಯಾಬ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಆಗಸ್ಟ್ 30ರ ಒಳಗಾಗಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು.
-ಬಿ.ಎಸ್.ಪ್ರಹ್ಲಾದ್, ಮುಖ್ಯಸ್ಥ, ಪಾಲಿಕೆ ಎಂಜಿನಿಯರಿಂಗ್ ವಿಭಾಗ
ತೀವ್ರವಾಗಿ ಗಾಯಗೊಂಡ ಸಿಬ್ಬಂದಿಗೆ ಪ್ಲಾಸ್ಟಿಕ್ ಸರ್ಜರಿ
ಬೆಂಕಿ ಅವಘಡದಲ್ಲಿ ಗಾಯಗೊಂಡ 9 ಮಂದಿಯ ಪೈಕಿ ತೀವ್ರವಾಗಿ ಗಾಯಗೊಂಡ ಮೂವರಿಗೆ ಚರ್ಮದ ಬ್ಯಾಂಕ್‌ನಿಂದ ಚರ್ಮ ಪಡೆದು ಕಸಿ ಮಾಡಲು ನಿರ್ಧರಿಸಲಾಗಿದೆ. ಅಗತ್ಯ ಬಿದ್ದರೆ, ಉಳಿದವರಿಗೂ ಮಾಡಲಾಗುವುದು. ಬುಧವಾರ ಗಾಯದ ಮೇಲಿನ ಸುಟ್ಟಕಪ್ಪು ಚರ್ಮವನ್ನು ತೆಗೆದು ಚಿಕಿತ್ಸೆ ನೀಡಲಾಗಿದೆ.