Asianet Suvarna News Asianet Suvarna News

ಕಮಿಷನ್ ಆರೋಪ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರಿಗೀಗ ಪೊಲೀಸ್‌ ತನಿಖೆ ಬಿಸಿ!

ಇತ್ತೀಚಿಗೆ ಬೃಹತ್‌ ಬೆಂಗಳೂರು ಮಹಾನಗರ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಾಕಿ ಹಣ ಪಾವತಿಗೆ ಶೇ.10 ರಿಂದ 15 ರಷ್ಟುಕಮಿಷನ್‌ ಬೇಡಿಕೆ ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರು ನೀಡಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.

contractor accused of commission issue the police investigation is now at bengaluru rav
Author
First Published Aug 18, 2023, 5:44 AM IST

ಬೆಂಗಳೂರು (ಆ.18) :  ಇತ್ತೀಚಿಗೆ ಬೃಹತ್‌ ಬೆಂಗಳೂರು ಮಹಾನಗರ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಾಕಿ ಹಣ ಪಾವತಿಗೆ ಶೇ.10 ರಿಂದ 15 ರಷ್ಟುಕಮಿಷನ್‌ ಬೇಡಿಕೆ ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರು ನೀಡಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ.

ಕಾಮಗಾರಿಗಳ ಹಣ ಬಿಡುಗಡೆ ಸಂಬಂಧ ತಮ್ಮ ಮೇಲೆ ಗುತ್ತಿಗೆದಾರರು ಬಾಹ್ಯ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ದೂರಿನ ಪ್ರತಿಯನ್ನು ಲಗತ್ತಿಸಿ ಬಿಬಿಎಂಪಿ(BBMP) ಹೆಚ್ಚುವರಿ ಆಯುಕ್ತರು (ಹಣಕಾಸು) ನೀಡಿದ್ದ ದೂರಿನ ಮೇರೆಗೆ ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಪ್ರಕಾಶ್‌ ರೆಡ್ಡಿ(ACP Prakash reddy) ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಶಾಕ್‌; ಬಿಜೆಪಿ ಶಾಸಕರ ಕ್ಷೇತ್ರಗಳ ವಾರ್ಡ್‌ಗಳಿಗೆ ಭರ್ಜರಿ ಕತ್ತರಿ!

ಈ ಸಂಬಂಧ ನೋಟಿಸ್‌ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಿದ್ದ 16 ಮಂದಿ ಬಿಬಿಎಂಪಿ ಗುತ್ತಿಗೆದಾರರನ್ನು ಪ್ರಶ್ನಿಸಿ ಎಸಿಪಿ ಪ್ರಕಾಶ್‌ ರೆಡ್ಡಿ ಹೇಳಿಕೆ ದಾಖಲಿಸಿಕೊಂಡಿದ್ದು, ಶುಕ್ರವಾರ ಸಹ ಮತ್ತೆ ಇನ್ನುಳಿದ ಗುತ್ತಿಗೆದಾರರ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಚಾರಣೆ ವೇಳೆ ಎರಡು ವರ್ಷಗಳ ಅವಧಿಯಲ್ಲಿ ತಾವು ಕೈಗೊಂಡಿದ್ದ ಕಾಮಗಾರಿಗಳ ಬಗ್ಗೆ ಪೊಲೀಸರಿಗೆ ಗುತ್ತಿಗೆದಾರರು ದಾಖಲೆ ಸಲ್ಲಿಸಿದ್ದಾರೆ. ಆದರೆ ಕಮಿಷನ್‌ ಆರೋಪ ಕುರಿತು ಸೂಕ್ತ ಪುರಾವೆಗಳನ್ನು ಗುತ್ತಿಗೆ ದಾರರು ಸಲ್ಲಿಸಿಲ್ಲ. ಕೆಲವರು ತಾವು ಕಮಿಷನ್‌ ಆರೋಪವನ್ನೇ ಮಾಡಿಲ್ಲ ಎಂದು ಸಮಜಾಯಿಷಿ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ಏನಿದು ದೂರು?: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಬಾಕಿ ಹಣ ಪಾವತಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರ ಹೆಸರಿನಲ್ಲಿ ಶೇ.10 ರಿಂದ 15 ರಷ್ಟುಕಮಿಷನ್‌ ಬೇಡಿಕೆಯನ್ನು ಕೆಲವರು ಇಟ್ಟಿದ್ದಾರೆ ಎಂದು ಆರೋಪ ಹೊರಿಸಿ ರಾಜ್ಯಪಾಲರಿಗೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ನೇತೃತ್ವದಲ್ಲಿ ಗುತ್ತಿಗೆದಾರರು ದೂರು ಸಲ್ಲಿಸಿದ್ದರು. ಈ ದೂರು ಸ್ವೀಕರಿಸಿದ ರಾಜ್ಯಪಾಲರು, ಈ ಆರೋಪದ ಬಗ್ಗೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು.

ಈ ಬೆಳವಣಿಗೆ ನಡುವೆಯೇ ಬಿಬಿಎಂಪಿ ಜಂಟಿ ಆಯುಕ್ತ (ಹಣಕಾಸು)ರು, ಹಣ ಬಿಡುಗಡೆ ಸಂಬಂಧ ಕಾಮಗಾರಿಗಳ ಪರಿಶೀಲನೆ ನಡೆದಿರುವಾಗಲೇ ತಮ್ಮ ಮೇಲೆ ಗುತ್ತಿಗೆದಾರರು ಬಾಹ್ಯ ಒತ್ತಡ ಹಾಕುತ್ತಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಹಾಗೂ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಅಲ್ಲದೆ ತಾವು ಸಲ್ಲಿಸಿದ ದೂರಿನ ಜತೆಗೆ ರಾಜ್ಯಪಾಲರಿಗೆ ಗುತ್ತಿಗೆದಾರರು ಕೊಟ್ಟಿದ್ದ ದೂರಿನ ಪ್ರತಿಯನ್ನು ಕೂಡಾ ಬಿಬಿಎಂಪಿ ಹೆಚ್ಚುವರಿ ಆಯುಕ್ತರು ಲಗತ್ತಿಸಿ ಪೊಲೀಸರಿಗೆ ಕೊಟ್ಟಿದ್ದರು.

ಈ ದೂರಿನ ತನಿಖೆಗೆ ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಪ್ರಕಾಶ್‌ ರೆಡ್ಡಿ ಅವರಿಗೆ ಡಿಸಿಪಿ ಸೂಚಿಸಿದರು. ಅದರನ್ವಯ ವಿಚಾರಣೆ ಕೈಗೆತ್ತಿಕೊಂಡ ಎಸಿಪಿ ಅವರು, ರಾಜ್ಯಪಾಲರಿಗೆ ದೂರಿಗೆ ಸಹಿ ಹಾಕಿದ್ದ 57 ಬಿಬಿಎಂಪಿ ಗುತ್ತಿಗೆದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರು. ಈ ಪೈಕಿ ವಿಚಾರಣೆಗೆ ಹಾಜರಾಗಿದ್ದ 16 ಮಂದಿ ಗುತ್ತಿಗೆದಾರರಿಂದ ಹೇಳಿಕೆ ಪಡೆದಿರುವ ಎಸಿಪಿ ಅವರು, ಇನ್ನುಳಿದವರ ವಿಚಾರಣೆಗೆ ಶುಕ್ರವಾರ ಬರುವಂತೆ ಸೂಚಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಮಗಾರಿಗಳ ವಿವರ ಕೇಳಿದ ಎಸಿಪಿ

ವಿಚಾರಣೆಗೆ ಹಾಜರಾಗಿದ್ದ ಗುತ್ತಿಗೆದಾರರಿಗೆ ತಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿದ್ದ ಕಾಮಗಾರಿಗಳ ವಿವರವನ್ನು ಎಸಿಪಿ ಪ್ರಕಾಶ್‌ ಪಡೆದುಕೊಂಡಿದ್ದಾರೆ. ಎಷ್ಟುಮೊತ್ತದ ಕಾಮಗಾರಿ ನಡೆಸಿದ್ದೀರಿ. ಅದರಲ್ಲಿ ಬಿಡುಗಡೆಯಾಗಿರುವ ಹಣವೆಷ್ಟುಬಾಕಿ ಇರುವ ಹಣವೆಷ್ಟುಎಂಬ ಬಗ್ಗೆ ಪ್ರಶ್ನಿಸಿ ಗುತ್ತಿಗೆದಾರರಿಂದ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. 

ಬಿಬಿಎಂಪಿ ವಾರ್ಡ್‌ ವಿಂಗಡಣೆ ಹಿಂದೆ ಅಡಗಿದೆ ‘9’ರ ರಹಸ್ಯ!

ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಸಂಬಂಧ ತಾವು ಸಲ್ಲಿಸಿದ ದೂರಿನ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಮಗೆ ಪೊಲೀಸರು ತೊಂದರೆ ಕೊಟ್ಟಿಲ್ಲ.

-ಮಂಜುನಾಥ್‌, ಅಧ್ಯಕ್ಷ, ಬಿಬಿಎಂಪಿ ಗುತ್ತಿಗೆದಾರರ ಸಂಘ

Follow Us:
Download App:
  • android
  • ios