ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಕರಡು ವರದಿ ಸಿದ್ಧಪಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದ ಸಮಿತಿ, ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಬೆಂಗಳೂರು (ಆ.18) : ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಕರಡು ವರದಿ ಸಿದ್ಧಪಡಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದ ಸಮಿತಿ, ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಹಿಂದಿನ ಸರ್ಕಾರ ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಮರುವಿಂಗಡಣೆ ಮಾಡಿತ್ತು. ಆದರೆ, ಅದರ ವಿರುದ್ಧ ಹೈಕೋರ್ಚ್‌ನಲ್ಲಿ ಕೆಲವರು ದಾವೆ ಹೂಡಿ, ವಾರ್ಡ್‌ ಮರು ವಿಂಗಡಣೆ ಸಮರ್ಪಕ ವಾಗಿಲ್ಲ ಎಂದು ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಹೈಕೋರ್ಚ್‌ ಲೋಪಗಳನ್ನು ಸರಿಪಡಿಸಿ ವಾರ್ಡ್‌ ಮರು ವಿಂಗಡಣೆ ವರದಿಯನ್ನು ಮತ್ತೆ ಸಲ್ಲಿಸುವಂತೆ ಸೂಚಿಸಿತ್ತು. ಅದರ ನಡುವೆಯೇ ರಾಜ್ಯ ಸರ್ಕಾರ 243 ವಾರ್ಡ್‌ಗಳನ್ನು 225ಕ್ಕೆ ಇಳಿಸಿ ಅಧಿಸೂಚನೆ ಪ್ರಕಟಿಸಿತ್ತು. ಅದರಂತೆ ಇದೀಗ ವಾರ್ಡ್‌ ಮರುವಿಂಗಡಣೆ ಮಾಡಿರುವ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದ ಸಮಿತಿ, ಆ ಕುರಿತ ಕರಡು ವರದಿ ರಚಿಸಿ ಸರ್ಕಾರಕ್ಕೆ ಸಲ್ಲಿಸಿದೆ.

ಬಿಬಿಎಂಪಿ ವಾರ್ಡ್‌ ವಿಂಗಡಣೆ ಹಿಂದೆ ಅಡಗಿದೆ ‘9’ರ ರಹಸ್ಯ!

ಕರಡು ವರದಿ ಶನಿವಾರ ಪ್ರಕಟ?

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕರಡು ವರದಿಗೆ ಸಾರ್ವಜನಿಕ ಆಕ್ಷೇಪಣೆ ಕರೆಯಬೇಕಿದೆ. ಅದಕ್ಕಾಗಿ ಶನಿವಾರ ಕರಡು ವರದಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ. ಜತೆಗೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ 7 ರಿಂದ 15 ದಿನಗಳ ಅವಕಾಶ ನೀಡಲಾಗುತ್ತದೆ. ಆ ಅವಧಿಯಲ್ಲಿ ಸಾರ್ವಜನಿಕರಿಂದ ಬರುವ ಆಕ್ಷೇಪಣೆಯನ್ನು ಪರಿಶೀಲಿಸಿ ನಂತರ ಅಂತಿಮ ವರದಿ ಪ್ರಕಟಿಸಲಾಗುತ್ತದೆ.

ಬಿಜೆಪಿ ಕ್ಷೇತ್ರಗಳ ವಾರ್ಡ್‌ಗಳ ಕಡಿತ

ಸದ್ಯ ಲಭ್ಯವಿರುವ ಮಾಹಿತಿಯಂತೆ 35 ಸಾವಿರ ಜನಸಂಖ್ಯೆ ಬದಲಿಗೆ ಸರಾಸರಿ 37,527 ಜನಸಂಖ್ಯೆಗೊಂದರಂತೆ ವಾರ್ಡ್‌ನ್ನು ರಚಿಸಲಾಗಿದೆ. ಅಲ್ಲದೆ, ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿನ ವಾರ್ಡ್‌ಗಳನ್ನು ಕಡಿತ ಗೊಳಿಸಿ 243ರ ಸಂಖ್ಯೆಯನ್ನು 225ಕ್ಕೆ ಇಳಿಸಲಾಗಿದೆ. ಒಟ್ಟು 14 ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲಿ ಗೋವಿಂದರಾಜನಗರ ಹೊರತುಪಡಿಸಿ ಉಳಿದ 13 ಕ್ಷೇತ್ರಗಳು ಬಿಜೆಪಿ ಶಾಸಕರು ಪ್ರತಿನಿಧಿ ಸುವಂತಹದ್ದಾಗಿದೆ. ಅದರಲ್ಲಿ ಪದ್ಮನಾಭನಗರ, ಮಹದೇವಪುರ, ಬೊಮ್ಮನಹಳ್ಳಿ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ತಲಾ 2 ವಾರ್ಡ್‌ಗಳನ್ನು ಕಡಿಮೆ ಮಾಡಿದ್ದರೆ, ಉಳಿದ 10 ವಾರ್ಡ್‌ಗಳಲ್ಲಿ ತಲಾ 1 ವಾರ್ಡ್‌ ಕಡಿತಗೊಳಿಸಲಾಗಿದೆ. ಒಟ್ಟು 18 ವಾರ್ಡ್‌ಗಳನ್ನು ಕಡತಗೊಳಿಸಿ 225 ವಾರ್ಡ್‌ಗಳನ್ನು ರಚಿಸಲಾಗಿದೆ.

ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?

ಯಾವೆಲ್ಲ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಕಡಿತ?

ಕೆ.ಆರ್‌. ಪುರ, ಯಶವಂತಪುರ, ರಾಜರಾಜೇಶ್ವರಿನಗರ, ಮಹಾಲಕ್ಷ್ಮೇಲೇಔಟ್‌, ಮಲ್ಲೇಶ್ವರ, ಸಿವಿ ರಾಮನ್‌ನಗರ, ರಾಜಾಜಿನಗರ, ಗೋವಿಂದರಾಜನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ.