ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆಯ ನಿಗದಿಯಲ್ಲಿ ಲಕ್ಕಿ ನಂಬರ್‌ ‘9’ರ ರಹಸ್ಯ ಅಡಗಿದ್ದು, ಈ ಹಿಂದಿನ ಸರ್ಕಾರ ನಿಗದಿ ಪಡಿಸಿರುವ 225 ವಾರ್ಡ್‌ ಸಂಖ್ಯೆಯು ಇದಕ್ಕೆ ಹೊರತಾಗಿಲ್ಲ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಆ.7) :  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆಯ ನಿಗದಿಯಲ್ಲಿ ಲಕ್ಕಿ ನಂಬರ್‌ ‘9’ರ ರಹಸ್ಯ ಅಡಗಿದ್ದು, ಈ ಹಿಂದಿನ ಸರ್ಕಾರ ನಿಗದಿ ಪಡಿಸಿರುವ 225 ವಾರ್ಡ್‌ ಸಂಖ್ಯೆಯು ಇದಕ್ಕೆ ಹೊರತಾಗಿಲ್ಲ.

ಬಿಬಿಎಂಪಿಯ ವಾರ್ಡ್‌ಗಳ ಮರು ವಿಂಗಡಣೆಯ ಪ್ರತಿ ಬಾರಿಯೂ ಸಂಖ್ಯಾ ಶಾಸ್ತ್ರದ ಪ್ರಕಾರ ಅದೃಷ್ಟಸಂಖ್ಯೆ ಎಂದು ಪರಿಣಿಸಲಾದ ‘9’ಕ್ಕೆ ಮಣೆ ಹಾಕಲಾಗಿದೆ. 2006-07ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಎಂಪಿ) 110 ಹಳ್ಳಿ ಹಾಗೂ ಎಂಟು ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆ ಮಾಡಿಕೊಂಡು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆ ಮಾಡಲಾಯಿತು. ಆ ಬಳಿಕ ಈವರೆಗೆ ಒಟ್ಟು ಮೂರು ಬಾರಿ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದೆ. ಪ್ರತಿ ಬಾರಿಯೂ ವಾರ್ಡ್‌ ಸಂಖ್ಯೆ ನಿಗದಿ ಪಡಿಸಿದಾಗಲೂ ಒಂದಲ್ಲಾ ಒಂದು ರೀತಿ ವಾರ್ಡ್‌ ಸಂಖ್ಯೆಗಳು ಅದೃಷ್ಟದ ಸಂಖ್ಯೆ‘9’ ರೊಂದಿಗೆ ನಂಟು ಹೊಂದಿದೆ.

ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?

ಹೀಗಿದೆ 9ರ ರಹಸ್ಯ:

2006-07ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿ, ಎಂಟು ಸ್ಥಳೀಯ ಸಂಸ್ಥೆಗಳನ್ನು ಸೇರ್ಪಡೆ ಮಾಡಿಕೊಂಡು 2009ರಲ್ಲಿ ಮಾಡಿದ ವಾರ್ಡ್‌ ಮರು ವಿಂಗಡಣೆ ಸಂದರ್ಭದಲ್ಲಿ 198 (1+9+8= 18) ವಾರ್ಡ್‌ಗಳಾಗಿ ರಚನೆ ಮಾಡಲಾಗುತ್ತು. 18 ಸಂಖ್ಯೆಯನ್ನು ಕೂಡಿಸಿದರೆ ಅದೃಷ್ಟದ ಸಂಖ್ಯೆ 9 ಬರುವಂತೆ ಮಾಡಲಾಗಿತ್ತು.

2021ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಾಡಲಾದ ವಾರ್ಡ್‌ ಮರು ವಿಂಗಡಣೆ ಸಂದರ್ಭದಲ್ಲಿ 243 ವಾರ್ಡ್‌ ಸಂಖ್ಯೆ ನಿಗದಿ ಪಡಿಸಲಾಗಿತ್ತು. ಆ ಸಂಖ್ಯೆಗಳನ್ನೂ (2+4+3=9) ಕೂಡಿಸಿದಾಗಲೇ ಲಕ್ಕಿ ನಂಬರ್‌ ಬರುವಂತೆ ನಿಗದಿ ಪಡಿಸಲಾಗಿತ್ತು.

ಇದೀಗ ಕಾಂಗ್ರೆಸ್‌ ನೇತೃತ್ವದ ಸರ್ಕಾರವೂ ಅದೃಷ್ಟದ ಸಂಖ್ಯೆಯ ಮೊರೆ ಹೋಗಿ ವಾರ್ಡ್‌ಗಳ ಸಂಖ್ಯೆ 225ಕ್ಕೆ ನಿಗದಿಪಡಿಸಿದೆ. ಅನ್ನು ಕೂಡಿಸಿದರೆ (2+2+5=9) ಸಂಖ್ಯಾ ಶಾಸ್ತ್ರದ ಪ್ರಕಾರದ ಅದೃಷ್ಟಸಂಖ್ಯೆ ‘9’ ಆಗಲಿದೆ.

ಕಾಂಗ್ರೆಸ್‌ ಮೊದಲ ಬಾರಿ ‘9’ರ ಮೊರೆ

2009 ಮತ್ತು 2021ರಲ್ಲಿ ವಾರ್ಡ್‌ ಮರು ವಿಂಗಡಣೆ ಮಾಡಿದ ಬಿಜೆಪಿ ಅದೃಷ್ಟಸಂಖ್ಯೆ ಮೊರೆ ಹೋಗಿ ಮಾಡಿತ್ತು. ಹೀಗಾಗಿ, ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ಅದೃಷ್ಟಸಂಖ್ಯೆ ಮೊರೆ ಹೋಗಲಿದೆ ಎನ್ನಲಾಗುತ್ತಿತ್ತು. ಇದೀಗ ಕಾಂಗ್ರೆಸ್‌ ಸಹ ಅದೃಷ್ಟಸಂಖ್ಯೆ ವಾರ್ಡ್‌ ಸಂಖ್ಯೆ ನಿಗದಿ ಪಡಿಸಿ ಅದೇ ಸಾಲಿಗೆ ಸೇರ್ಪಡೆಯಾಗಿದೆ.

ಬಿಬಿಎಂಪಿ ರಚನೆ ಬಳಿಕ 9ರ ಸಂಸ್ಕೃತಿ

ಬಿಬಿಎಂಪಿ ರಚನೆಗೆ ಮುನ್ನ ಈ ರೀತಿ ವಾರ್ಡ್‌ ಸಂಖ್ಯೆಯ 9ಕ್ಕೆ ಹೊಂದಿಕೊಂಡಿರುವಂತೆ ರಚನೆ ಮಾಡುವ ಸಂಸ್ಕೃತಿ ಇರಲಿಲ್ಲ. ಸ್ವಾತಂತ್ಯ ಬಂದ ಬಳಿಕ 1949ರಲ್ಲಿ ಎರಡು ಕಾಪೋರೇಷನ್‌ಗಳನ್ನು ಬೆಂಗಳೂರು ನಗರಕ್ಕೆ ವಿಲೀನ ಮಾಡಲಾಯಿತು. ಆಗ 75 ಜನ ಪ್ರತಿನಿಧಿಗಳಿದ್ದರು. 1995ರಲ್ಲಿ ಬೆಂಗಳೂರು ಸಿಟಿ ಕಾಪೋರೇಷನ್‌ ರಚನೆ ಮಾಡಿ ಹೆಚ್ಚುವರಿಯಾಗಿ 36 ವಾರ್ಡ್‌ ಸೇರಿ ಒಟ್ಟು ವಾರ್ಡ್‌ಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಳ ಮಾಡಲಾಯಿತು. ತದ ನಂತರ 2006-07ರಲ್ಲಿ ಬಿಬಿಎಂಪಿ ರಚನೆ ಮಾಡಲಾಯಿತು. ಆ ಬಳಿಕ 9 ಅದೃಷ್ಟಸಂಖ್ಯೆ ಹುಡುಕಾಟ ಶುರುವಾಯಿತು.

243 ವಾರ್ಡ್‌ಗೆ ಚುನಾವಣೆಯೇ ನಡೆಯಲಿಲ್ಲ

ಬಿಜೆಪಿ ನೇತೃತ್ವದ ಸರ್ಕಾರವು 2021ರಲ್ಲಿ ಅದೃಷ್ಟಸಂಖ್ಯೆ ಎಂದು ಮಾಡಿದ 243 ವಾರ್ಡ್‌ಗೆ ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಚುನಾವಣೆ ನಡೆಸುವುದಕ್ಕೆ ಸಾಧ್ಯವಾಗಲಿಲ್ಲ. ಇದೀಗ ಕಾಂಗ್ರೆಸ್‌ ಸರ್ಕಾರವೂ 243 ವಾರ್ಡ್‌ಗಳ ಸಂಖ್ಯೆಯನ್ನು ರದ್ದುಪಡಿಸಿ ಅದೃಷ್ಟಸಂಖ್ಯೆ ಹೊಂದಿಕೊಳ್ಳುವ 225 ವಾರ್ಡ್‌ ನಿಗದಿ ಪಡಿಸಿದೆ. ಈಗಲಾದರೂ ಬಿಬಿಎಂಪಿಗೆ ಚುನಾವಣೆ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 243ರಿಂದ 225ಕ್ಕೆ ಇಳಿಸಿ ಆದೇಶ

ಏನಿದು 9ರ ವಿಶೇಷ?

ಸಂಖ್ಯಾಶಾಸ್ತ್ರದ ಪ್ರಕಾರ ‘9’ ಅಂಕಿ ಅತ್ಯಂತ ಶಕ್ತಿಶಾಲಿ ಮತ್ತು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗಿದೆ. ನವಗ್ರಹ, ನವಧಾನ್ಯ, ನವಶಕ್ತಿಗಳು, ನವವಿಧ ಭಕ್ತಿಗಳು, ನವನಿಧಿಗಳು, ಮಹಾಭಾರತದಲ್ಲಿ 18 (1+8=9) ಪರ್ವಗಳು, ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಈ ಕಾರಣಕ್ಕೆ ಬಹುತೇಕ ವಾಹನ ಮಾಲಿಕರು ತಮ್ಮ ವಾಹನಗಳ ನೋಂದಣಿ ಸಂಖ್ಯೆ, ಬಳಕೆ ಮಾಡುವ ಮೊಬೈಲ್‌ ಸಂಖ್ಯೆ ಒಂದಲ್ಲ ಒಂದು ರೀತಿಯಲ್ಲಿ ‘9’ರ ಸಂಬಂಧ ಹೊಂದಬೇಕೆಂದು ಬಯಸುತ್ತಾರೆ. ಅದೇ ರೀತಿ ಚುನಾವಣೆ ಗೆಲ್ಲುವುದಕ್ಕೆ ಬಿಬಿಎಂಪಿಯ ವಾರ್ಡ್‌ ಸಂಖ್ಯೆಗಳನ್ನು ಲಕ್ಕಿ ನಂಬರ್‌ಗೆ ಹೊಂದಿಕೊಳ್ಳುವಂತೆ ಮಾಡಲಾಗಿದೆ ಎನ್ನಲಾಗುತ್ತದೆ.