1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್
ಗುತ್ತಿಗೆ ಸರ್ಕಾರಿ ವೈದ್ಯರ ಪಟ್ಟಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ 507 ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸುವ ಭರವಸೆ ನೀಡಿದೆ.
ಬೆಂಗಳೂರು(ಜು.09): ಗುತ್ತಿಗೆ ಸರ್ಕಾರಿ ವೈದ್ಯರ ಪಟ್ಟಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ 507 ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸುವ ಭರವಸೆ ನೀಡಿದೆ.
ಸೇವೆ ಕಾಯಂಗೊಳಿಸುವ ಭರವಸೆ ನೀಡಿದ್ದರೂ ಯಾವ ಅವಧಿಯಲ್ಲಿ ಸೇವೆ ಕಾಯಂಗೊಳ್ಳಲಿದೆ ಎಂಬ ಖಚಿತ ಭರವಸೆ ದೊರೆಯದ ಕಾರಣ ಬುಧವಾರವೂ ಮುಷ್ಕರ ನಡೆಸಿದ್ದ ಗುತ್ತಿಗೆ ವೈದ್ಯರು ಸಿಎಂ ಭೇಟಿಯಾಗಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಈ ಭರವಸೆ ನೀಡಿದ್ದಾರೆ.
ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ
ಸಚಿವ ಬಿ. ಶ್ರೀರಾಮುಲು ಹಾಗೂ ಹಿರಿಯ ಅಧಿಕಾರಿಗಳ ಜೊತೆ ನಡೆದ ಮಾತುಕತೆ ಫಲಪ್ರದ ವಾದ ಹಿನ್ನೆಲೆಯಲ್ಲಿ ವೈದ್ಯರು ಸಾಮೂಹಿಕ ರಾಜೀನಾಮೆ ಕೈ ಬಿಟ್ಟಿದ್ದು, ಗುರುವಾರದಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಗುತ್ತಿಗೆ ವೈದ್ಯರ ಜೊತೆ ಮಾತುಕತೆ ನಂತರ ಸುದ್ದಿಗಾರರಿಗೆ ಖುದ್ದು ಶ್ರೀರಾಮುಲು ಈ ವಿಷಯ ತಿಳಿಸಿದರು.
ಈ ಹಿಂದೆ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಎರಡು ಸಾವಿರ ವೈದ್ಯರನ್ನು ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಕೆಲವರ ಸೇವೆ ಕಾಯಂ ಮಾಡಲಾಗಿತ್ತು. ಆದರೆ ಸುಮಾರು 507 ವೈದ್ಯರ ಸೇವೆಯನ್ನು ಕಾಯಂ ಮಾಡಲು ಆಗಿರಲಿಲ್ಲ. ಈಗ ಅವರನ್ನು ಸಹ ಒಂದು ತಿಂಗಳೊಳಗೆ ಕಾಯಂ ಮಾಡಲಾಗುವುದು ಎಂದರು.
ಭಾರತ, ಅಮೆರಿಕಾ ಸೇರಿ ಚೀನಾ ಬುಡಕ್ಕೆ 'D'ಬಾಂಬ್..!
ಸೇವೆ ಕಾಯಂಗೊಳಿಸಲು ಅನುವಾಗುವಂತೆ ನೇಮಕಾತಿ ನಿಯಮಗಳಿಗೆ ಕೆಲ ತಿದ್ದುಪಡಿ ಮಾಡುವಂತೆ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗೆಗಿನ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.
ಸೇವೆ ಕಾಯಂ ಕುರಿತು ನೀಡಿರುವ ಭರವಸೆಯಲ್ಲಿ ರಾಗಿ ಕಾಳಿನಷ್ಟೂಬದಲಾವಣೆಯಾಗಲ್ಲ. ಗುತ್ತಿಗೆ ವೈದ್ಯರ ಜೊತೆ ಮುಖ್ಯಮಂತ್ರಿ ಹಾಗೂ ತಾವು ಇದ್ದೇವೆ. ಕಷ್ಟಕಾಲದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಗಡುವಿಗೆ ವೈದ್ಯರ ಪಟ್ಟು:
ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರೂ ನಿರ್ದಿಷ್ಟಅವಧಿಯಲ್ಲಿ ಸೇವೆ ಕಾಯಂಗಾಗಿ ಒತ್ತಾಯಿಸಲು ಸುಮಾರು 150ಕ್ಕೂ ಹೆಚ್ಚು ವೈದ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾಗಿದ್ದರು. ಕುಮಾರಕೃಪ ಅತಿಥಿಗೃಹ ಬಳಿ ವೈದ್ಯರನ್ನು ಪೊಲೀಸರು ತಡೆದು ನಂತರ ಅತಿಥಿ ಗೃಹದ ಒಳಗೆ ಕಳುಹಿಸಿದರು. ಅಲ್ಲಿಗೆ ಬಂದ ಸಚಿವ ಬಿ. ಶ್ರೀರಾಮುಲು ಒಂದು ತಿಂಗಳೊಳಗೆ ಸೇವೆ ಕಾಯಂಗೊಳಿಸುವುದಾಗಿ ಎಂದು ಭರವಸೆ ನೀಡಿದರು.
ಯಾವ ತಿದ್ದುಪಡಿ?
ಈ ಹಿಂದೆ ಮೂರು ವರ್ಷ ಗುತ್ತಿಗೆ ಅವಧಿ ಪೂರ್ಣಗೊಳಿಸಿದವರ ಸೇವೆಯನ್ನು ಕಾಯಂ ಮಾಡಲಾಗುತ್ತಿತ್ತು. ಇದೇ ನಿಯಮ ಅನ್ವಯಿಸಿ ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸಲು ಸರ್ಕಾರ ಉದ್ದೇಶಿಸಿದ್ದರೂ ಪ್ರಸ್ತುತ ಗುತ್ತಿಗೆ ಅಡಿ ಸೇವೆ ಸಲ್ಲಿಸುತ್ತಿರುವರ ಪೈಕಿ ಸುಮಾರು 50ಕ್ಕಿಂತ ಹೆಚ್ಚು ವೈದ್ಯರ ಸೇವಾವಧಿ 6 ತಿಂಗಳಿಂದ 1 ವರ್ಷದೊಳಗೆ ಮಾತ್ರ ಇದೆ. ಹೀಗಾಗಿ ಈ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಅದಕ್ಕೆ ಕೃಪಾಂಕ ನೀಡಿ, ಅದರ ಆಧಾರದ ಮೇಲೆ ಕಾಯಂ ಗೊಳಿಸಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ತರಬೇಕಾಗುತ್ತದೆ.