Asianet Suvarna News Asianet Suvarna News

ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ

ಗಲ್ವಾನ್‌ ಕಣಿವೆಯಲ್ಲಿ ಮಂಗಳವಾರ ಹಾಗೂ ಹಾಟ್‌ ಸ್ಟ್ರಿಂಗ್‌ ಪ್ರದೇಶದ ಗಸ್ತು ಪಾಯಿಂಟ್‌ 15ರ ಬಳಿಯಿಂದ ಬುಧವಾರ ಚೀನಾ ಸೇನೆ ಜಾಗ ಖಾಲಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Chinese Soldiers shift 2 km back from ladakh Galwan Valley clash site
Author
New Delhi, First Published Jul 9, 2020, 7:39 AM IST

ನವದೆಹಲಿ(ಜು.09): ಭಾರತ-ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸಂಘರ್ಷ ಏರ್ಪಟ್ಟಿದ್ದ ನಾಲ್ಕು ವಿವಾದಿತ ಸ್ಥಳಗಳ ಪೈಕಿ ಎರಡು ಸ್ಥಳಗಳಿಂದ ಉಭಯ ಸೇನೆಗಳು ಪೂರ್ವ ನಿರ್ಧರಿತ ರೀತಿಯಲ್ಲಿ 2 ಕಿ.ಮೀ.ನಷ್ಟುಹಿಂದಕ್ಕೆ ಸರಿಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಗಲ್ವಾನ್‌ ಕಣಿವೆಯಲ್ಲಿ ಮಂಗಳವಾರ ಹಾಗೂ ಹಾಟ್‌ ಸ್ಟ್ರಿಂಗ್‌ ಪ್ರದೇಶದ ಗಸ್ತು ಪಾಯಿಂಟ್‌ 15ರ ಬಳಿಯಿಂದ ಬುಧವಾರ ಚೀನಾ ಸೇನೆ ಜಾಗ ಖಾಲಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಗೋಗ್ರಾ ಪ್ರದೇಶದ 17ಎ ಗಸ್ತು ಪಾಯಿಂಟ್‌ನಿಂದ ಗುರುವಾರ ಉಭಯ ಸೇನೆಗಳು 2 ಕಿ.ಮೀ. ಹಿಂದಕ್ಕೆ ಸರಿಯಲಿವೆ ಎಂದು ಹೇಳಲಾಗಿದೆ. ಆದರೆ, ನಾಲ್ಕನೇ ವಿವಾದಿತ ಪ್ರದೇಶವಾದ ಪ್ಯಾಂಗಾಂಗ್‌ ಲೇಕ್‌ನ ಫಿಂಗರ್‌ 4 ಪ್ರದೇಶದಲ್ಲಿ ಈಗಲೂ ಚೀನಾದ ಚಟುವಟಿಕೆಗಳು ಕಂಡುಬರುತ್ತಿವೆ. ಅಲ್ಲಿಂದ ವಾಹನಗಳು ಹಾಗೂ ಟೆಂಟ್‌ಗಳನ್ನು ತೆರವುಗೊಳಿಸಿದ್ದರೂ ಕಣಿವೆಯ ಬೆಟ್ಟದ ಮೇಲೆ ಚೀನಾದ ಸೇನೆ ಈಗಲೂ ಇದೆ ಎಂದು ಮೂಲಗಳು ಹೇಳಿವೆ.

ಭಾರತ, ಅಮೆರಿಕಾ ಸೇರಿ ಚೀನಾ ಬುಡಕ್ಕೆ 'D'ಬಾಂಬ್..!

ಸೇನೆ ಹಿಂಪಡೆತ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉಭಯ ದೇಶಗಳು ನೇಮಿಸಿರುವ ವಿಶೇಷ ಪ್ರತಿನಿಧಿಗಳಾದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ಭಾನುವಾರ ನಡೆದ ಸುದೀರ್ಘ ಮಾತುಕತೆಯ ನಂತರ ಸೇನೆ ಹಿಂಪಡೆತ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಮೂರು ದಿನಗಳಲ್ಲಿ ಅರ್ಧದಷ್ಟು ಹಿಂದೆಗೆತ ಪೂರ್ಣವಾಗಿದ್ದು, ಚೀನಾ ಸೇನೆಯೀಗ ಎರಡೂ ದೇಶಗಳು ಗೌರವಿಸುವ ನೈಜ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಒಳಗೇ ಇದೆ. ಉಪಗ್ರಹ ಚಿತ್ರದಲ್ಲಿ ಗಲ್ವಾನ್‌ ನದಿ ಭಾರತಕ್ಕೆ ಪ್ರವೇಶಿಸುವ ಸ್ಥಳದಲ್ಲಿ ಈಗ ಚೀನಾ ಸೇನೆಯ ಟೆಂಟ್‌ಗಳು ಕಾಣಿಸುತ್ತಿಲ್ಲ. ಇನ್ನು ಎರಡು-ಮೂರು ದಿನಗಳಲ್ಲಿ ಇನ್ನೆರಡು ಪ್ರದೇಶಗಳಿಂದಲೂ ಸೇನೆ ವಾಪಸ್‌ ಹೋಗಲಿದ್ದು, ಮುಂದಿನ ವಾರ ಉಭಯ ದೇಶಗಳ ನಡುವೆ ಇನ್ನೊಂದು ಸುತ್ತಿನ ಉನ್ನತ ಹಂತದ ಮಾತುಕತೆ ನಡೆಯಲಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios