ಇ-ಶ್ರಮ್‌ ಪೋರ್ಟಲ್‌ ಮೂಲಕ 7.28 ಲಕ್ಷ ಟೈಲರ್‌ ಗಳು ಅಸಂಘಟಿತ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ನೇಕಾರರಿಗೆ ನಮ್ಮ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಸೆಸ್‌ ಹಣ ಬಳಸಿ ಕಾರ್ಯಕ್ರಮ ರೂಪಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಸಂತೋಷ್‌ ಲಾಡ್‌ 

ವಿಧಾನಸಭೆ(ಡಿ.06): ‘ರಾಜ್ಯದಲ್ಲಿನ ಗ್ಯಾರೇಜ್‌ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿ ಮೋಟಾರು ವಾಹನಗಳ ಖರೀದಿ ಮೇಲೆ ಸಾರಿಗೆ ಸೆಸ್‌ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದರಿಂದ 25 ರಿಂದ 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗುರ್ಮೆ ಸುರೇಶ್‌ ಶೆಟ್ಟಿ, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಟೈಲರಿಂಗ್‌ ವೃತ್ತಿನಿರತ ಕಾರ್ಮಿಕರಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಯು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜತೆಗೆ ಕಟ್ಟಡ ಕಾರ್ಮಿಕರ ಸೆಸ್‌ನಿಂದ ಟೈಲರ್‌ಗಳು, ನೇಕಾರರಂತಹ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲ್ಲ: ಸಚಿವ ಸಂತೋಷ್ ಲಾಡ್‌

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್‌ ಲಾಡ್‌, ಇ-ಶ್ರಮ್‌ ಪೋರ್ಟಲ್‌ ಮೂಲಕ 7.28 ಲಕ್ಷ ಟೈಲರ್‌ ಗಳು ಅಸಂಘಟಿತ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ನೇಕಾರರಿಗೆ ನಮ್ಮ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಸೆಸ್‌ ಹಣ ಬಳಸಿ ಕಾರ್ಯಕ್ರಮ ರೂಪಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ, ಗಿಗ್‌ ಕಾರ್ಮಿಕರು, ಗ್ಯಾರೇಜ್‌ ಕಾರ್ಮಿಕರು ಸೇರಿದಂತೆ ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಕಾರ್ಯಕ್ರಮಗಳನ್ನು ರೂಪಿಸಲು ಹೊಸದಾಗಿ ಸಾರಿಗೆ ಸೆಸ್‌ ಪ್ರಸ್ತಾಪಿಸಲಾಗುತ್ತಿದೆ. ಇದಕ್ಕೆ ಸದ್ಯದಲ್ಲೇ ಸಾರಿಗೆ ಇಲಾಖೆಯಿಂದ ಬಿಲ್‌ ಮಂಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರೊಂದಿಗೂ ಚರ್ಚಿಸಲಾಗಿದೆ ಎಂದರು.

ಹೊಸ ಸೆಸ್‌ ವಿಧಿಸಲು ಚಿಂತನೆ:

ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ ಹೊಸ ವಾಹನಗಳ ನೋಂದಣಿ ವೇಳೆ ಶೇ.13 ರಿಂದ 20 ರಷ್ಟು ರಸ್ತೆ ತೆರಿಗೆ ವಿಧಿಸಲಾಗುತ್ತಿದೆ. ಜತೆಗೆ ಶೇ.11 ರಷ್ಟು ಸೆಸ್‌ ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಶೇ.10 ರಷ್ಟು ಮೂಲಸೌಕರ್ಯ ಸೆಸ್‌ ಹಾಗೂ ಶೇ.1 ರಷ್ಟು ನಗರ ಸಾರಿಗೆ ಸೆಸ್‌ ಎಂದು ಸಂಗ್ರಹ ಮಾಡಲಾಗುತ್ತಿದೆ.

ಇದೀಗ ಹೆಚ್ಚುವರಿಯಾಗಿ ಶೇ.5 ರಷ್ಟು ಸೆಸ್‌ ವಿಧಿಸಿ ಆ ಹಣವನ್ನು ಕಾರ್ಮಿಕ ಇಲಾಖೆಗೆ ಹಸ್ತಾಂತರಿಸಬೇಕು. ಆ ಹಣದಿಂದ ಕಾರ್ಮಿಕ ಇಲಾಖೆಯು ಗಿಗ್‌ ಕಾರ್ಮಿಕರು (ಸ್ವಿಗ್ಗಿ, ಜೊಮಾಟೋ ರೀತಿ), ಗ್ಯಾರೇಜ್‌ ಕಾರ್ಮಿಕರು, ಸಾರಿಗೆ ವಲಯದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ.

ದೇಶದಲ್ಲಿ ಏನೇ ಕೆಟ್ಟದಾದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ: ಸಚಿವ ಸಂತೋಷ್ ಲಾಡ್‌

ಮತ್ತೊಂದು ಮೂಲದ ಪ್ರಕಾರ, ಹೆಚ್ಚುವರಿ ಶೇ.5 ರಷ್ಟು ಸೆಸ್‌ ವಿಧಿಸುವ ಬದಲು ಹಾಲಿ ಸಂಗ್ರಹವಾಗುತ್ತಿರುವ ಸೆಸ್‌ನಲ್ಲಿಯೇ ಒಂದಷ್ಟು ಪಾಲಿನ ಹಣವನ್ನು ಕಾರ್ಮಿಕ ಇಲಾಖೆಗೆ ವರ್ಗಾಯಿಸಬೇಕು. ಜತೆಗೆ ಶೇ.2-3 ರಷ್ಟಕ್ಕೆ ಸೀಮಿತವಾಗಿ ಸಾರಿಗೆ ಸೆಸ್‌ ಹೆಚ್ಚಳ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ 2024ರ ಫೆಬ್ರುವರಿ ಬಳಿಕವಷ್ಟೇ ಬಿಲ್‌ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.

ಎಷ್ಟು ತೆರಿಗೆ ಹೊರೆ?

-ರಾಜ್ಯದಲ್ಲಿ ಪ್ರಸ್ತುತ ಹೊಸ ವಾಹನಗಳ ನೋಂದಣಿ ವೇಳೆ ಶೇ.13 ರಿಂದ 20 ರಷ್ಟು ರಸ್ತೆ ತೆರಿಗೆ ಇದೆ.
-ಇದರ ಜತೆಗೆ ಶೇ.10 ರಷ್ಟು ಮೂಲಸೌಕರ್ಯ ಸೆಸ್‌ ಹಾಗೂ ಶೇ.1 ರಷ್ಟು ನಗರ ಸಾರಿಗೆ ಸೆಸ್‌ ವಿಧಿಸಲಾಗಿದೆ
-ಇದೀಗ ಹೆಚ್ಚುವರಿಯಾಗಿ ಶೇ.5 ರಷ್ಟು ಸೆಸ್‌ ವಿಧಿಸಲು ಚಿಂತನೆ ನಡೆದಿದೆ.