Asianet Suvarna News Asianet Suvarna News

ಕಾರವಾರ, ಮಂಗಳೂರಲ್ಲಿ ಹೊಸ ಬಂದರು ನಿರ್ಮಾಣ: ಸಚಿವ ಮಂಕಾಳ್‌ ವೈದ್ಯ

ಕರಾವಳಿಯ ಮೂರು ಜಿಲ್ಲೆಗಳ ಒಳನಾಡು ಜಲಸಾರಿಗೆ, ಮೀನುಗಾರಿಕೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ಮಾಡಲಾಗಿದೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ: ಮೀನುಗಾರಿಕೆ ಸಚಿವ ಮಂಕಾಳ್‌ ವೈದ್ಯ 

Construction of New Port at Karwar and Mangaluru Says Minister Mankal S Vaidya grg
Author
First Published Nov 10, 2023, 6:55 AM IST

ಬೆಂಗಳೂರು(ನ.10): ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಬಂದರುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ್‌ ವೈದ್ಯ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಕರಾವಳಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳ ಒಳನಾಡು ಜಲಸಾರಿಗೆ, ಮೀನುಗಾರಿಕೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ಮಾಡಲಾಗಿದೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೋಟ್‌ಗಳ ನಿಲುಗಡೆಗೆ ಅವಕಾಶ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಕಾರವಾರ ಮತ್ತು ಮಂಗಳೂರಿನಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾದ ನಂತರ ಅಂದಾಜು ವೆಚ್ಚದ ಬಗ್ಗೆ ತಿಳಿಯಲಿದೆ. ಒಂದು ಕೋಟಿ ರು. ನಿಂದ ಸಾವಿರ ಕೋಟಿ ರು. ವೆಚ್ಚ ಗಾತ್ರದ ಬಂದರುಗಳಿವೆ. ಮೂರು ಜಿಲ್ಲೆಗಳಲ್ಲಿ ಒಟ್ಟು 13 ದ್ವೀಪ ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಲು ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.

ಅಂಕೋಲಾ ಏರ್ಪೋರ್ಟ್‌ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ಪರ್ಯಾಯ ಭೂಮಿ: ಸಚಿವ ಮಂಕಾಳ್‌ ವೈದ್ಯ ಭರವಸೆ

ಮೀನುಗಾರರಿಗೆ ನೀಡಲಾಗುತ್ತಿದ್ದ ವಾರ್ಷಿಕ ಡಿಸೇಲ್‌ ಪ್ರಮಾಣವು 1.50 ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಳ ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಇನ್ನು, ನಿರಂತರ ಮನವಿ ಮಾಡಿದರೂ ಕೇಂದ್ರ ಸರ್ಕಾರ ವಾರ್ಷಿಕ ಸೀಮೆ ಎಣ್ಣೆ ಹಂಚಿಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಾಸಿಕ 200 ಲೀಟರ್ ವೈಟ್ ಪೆಟ್ರೋಲ್‌ ಅನ್ನು ಲೀಟರ್‌ಗೆ 35 ರು. ನಂತೆ ಸಬ್ಸಿಡಿ ದರದಲ್ಲಿ 10 ತಿಂಗಳ ಕಾಲ ವಿತರಿಸಲಿದ್ದು, 300 ಲೀಟರ್ ವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ 1,015 ಕೋಟಿ ರೂ. ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಆದರೆ ಕರಾವಳಿ ನಿಯಂತ್ರಣ ವಲಯ ಕಠಿಣ ನಿಯಮಗಳ ಕಾರಣ 2017ರಿಂದ ಬಳಕೆ ಸಾಧ್ಯವಾಗಿಲ್ಲ.ನಿರಂತರ ಮನವಿ ಬಳಿಕ ಕೇಂದ್ರ ಸರ್ಕಾರ ಸಿಆರ್‌ ಝಡ್ ನಿಯಮಗಳಲ್ಲಿ ಅಲ್ಪ ಸಡಿಲಿಕೆ ನೀಡಿದ ಹಿನ್ನೆಲೆಯಲ್ಲಿ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಲಭಿಸಿದೆ. ಸಾಗರಮಾಲಾ ಯೋಜನೆಯಡಿ ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ, ಜಲಸಾರಿಗೆ ಮಂಡಳಿ ಸಭೆಯಲ್ಲಿ ಅನುಮೋದನೆಗೆ ಮಂಡಿಸಲಾಗುವುದು ಎಂದು ಹೇಳಿದರು.

ಕ್ರಿಮ್ಸ್‌ನಲ್ಲಿ 'ಮುನ್ನಾಭಾಯಿ ಎಂಬಿಬಿಎಸ್' ನೋಡಿ ಆಕ್ರೋಶಗೊಂಡ ಸಚಿವ ಮಂಕಾಳ ವೈದ್ಯ!

ಮತ್ಸ್ಯ ವಾಹನಗಳಿಗೆ ಚಾಲನೆ:

ನ.21ರಂದು ವಿಶ್ವ ಮತ್ಸ್ಯ ದಿನ ಪ್ರಯುಕ್ತ ಬೆಂಗಳೂರಲ್ಲಿ ಮತ್ಸ್ಯ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಮೂಲಕ ಬೆಂಗಳೂರಿನ ಮೀನು ಖಾದ್ಯ ಪ್ರಿಯರ ಮನೆಗೆ ಬಾಗಿಲಿಗೆ ಕರಾವಳಿ ಮೀನು ಮಾರಾಟ ಮಾಡಲಾಗುವುದು. ಫ್ರಿಜ್, ತೂಕದ ಯಂತ್ರ ಮತ್ತಿತರ ಅನುಕೂಲತೆಯುಳ್ಳ ಸುಸಜ್ಜಿತವಾದ ಎಂಟು ಲಕ್ಷ ರು. ವೆಚ್ಚದ ವಾಹನಗಳಲ್ಲಿ ಕರಾವಳಿಯ ತರಹೇವಾರಿ ಮೀನುಗಳ ಮಾರಾಟ ವ್ಯವಸ್ಥೆಯಿರುತ್ತದೆ ಎಂದು ಇದೇ ವೇಳೆ ಸಚಿವರು ಹೇಳಿದರು.

ಆಸಕ್ತರು ಅರ್ಜಿ ಸಲ್ಲಿಸಿದರೆ ಎರಡು ಲಕ್ಷ ರು. ಭದ್ರತಾ ಠೇವಣಿ, ಮಾಸಿಕ ಮೂರು ಸಾವಿರ ರು. ನಿರ್ವಹಣಾ ವೆಚ್ಚ ಭರಿಸುವ ಷರತ್ತಿನ ಮೇಲೆ ಈ ವಾಹನಗಳನ್ನು ವಿತರಿಸಲಾಗುತ್ತದೆ. ಬೇಡವೆಂದಾಗ ವಾಹನಗಳನ್ನು ಹಿಂತಿರುಗಿಸಿ, ಭದ್ರತಾ ಠೇವಣಿ ವಾಪಸ್ ಪಡೆಯಲು ಅವಕಾಶವಿದೆ. ಮೊದಲ ಹಂತದಲ್ಲಿ 150 ಮತ್ಸ್ಯ ವಾಹನಗಳು ಬೆಂಗಳೂರಿನಲ್ಲಿ ಸಂಚರಿಸಿ ಮೀನುಗಳನ್ನು ಮಾರಾಟ ಮಾಡಲಿದೆ ಎಂದರು.

Follow Us:
Download App:
  • android
  • ios