Asianet Suvarna News Asianet Suvarna News

ಕ್ರಿಮ್ಸ್‌ನಲ್ಲಿ 'ಮುನ್ನಾಭಾಯಿ ಎಂಬಿಬಿಎಸ್' ನೋಡಿ ಆಕ್ರೋಶಗೊಂಡ ಸಚಿವ ಮಂಕಾಳ ವೈದ್ಯ!

ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕ್ರಿಮ್ಸ್) ನೂರಾರು ವೈದ್ಯರು ಸೇವೆ ಸಲ್ಲಿಸ್ತಿದ್ರೆ, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಇಂದು ಈ ಕ್ರಿಮ್ಸ್ ಕಾಲೇಜಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಮಾಂಕಾಳು ವೈದ್ಯರಿಗೆ ಅಕ್ಷರಶಃ "ಮುನ್ನಾಭಾಯಿ ಎಂಬಿಬಿಎಸ್" ಸಿನಿಮಾದಂತಹ ಸನ್ನಿವೇಶಗಳು ಎದುರಾಗಿವೆ. 

Crims Disciplinary action if disorder not corrected Says Minister Mankal Vaidya gvd
Author
First Published Nov 9, 2023, 1:00 AM IST

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ನ.09): ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕ್ರಿಮ್ಸ್) ನೂರಾರು ವೈದ್ಯರು ಸೇವೆ ಸಲ್ಲಿಸ್ತಿದ್ರೆ, ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಇಂದು ಈ ಕ್ರಿಮ್ಸ್ ಕಾಲೇಜಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಮಾಂಕಾಳು ವೈದ್ಯರಿಗೆ ಅಕ್ಷರಶಃ "ಮುನ್ನಾಭಾಯಿ ಎಂಬಿಬಿಎಸ್" ಸಿನಿಮಾದಂತಹ ಸನ್ನಿವೇಶಗಳು ಎದುರಾಗಿವೆ. ಕಾಲೇಜಿನ ಡೀನ್‌ನಿಂದ ಹಿಡಿದು ಹಲವು ವಿಭಾಗಗಳ ಮುಖ್ಯಸ್ಥರು, ಒಂದಲ್ಲಾ ಒಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕ್ರಿಮ್ಸ್) ಸಮಸ್ಯೆ ಆಲಿಸಲು ಹೋದ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಅಲ್ಲಿನ ಪರಿಸ್ಥಿತಿ ನೋಡಿ ಅಕ್ಷರಶಃ ಹೌಹಾರಿದ ಘಟನೆ ನಡೆದಿದೆ. ಕಾಲೇಜಿನ ಡೀನ್ ಹಾಗೂ ಕೆಲವು ವಿಭಾಗಗಳ ಮಖ್ಯಸ್ಥರ "ಮುನ್ನಾಭಾಯಿ ಎಂಬಿಬಿಎಸ್" ಚಿತ್ರದಂತಹ ಸನ್ನಿವೇಶ ಕಂಡು ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ. ಕಾಲೇಜಿನ ಟೆಂಡರ್ ನೋಡಿಕೊಳ್ಳುವ ಅಧಿಕಾರಿ ಯಾರು ಎಂದು ಕೇಳಿದರೆ ಗುತ್ತಿಗೆ ಸಿಬ್ಬಂದಿಯನ್ನು ತೋರಿಸಿದರೆ, ವಿಭಾಗಗಳ ಮುಖ್ಯಸ್ಥರು ಯಾರು ಎಂದರೆ ಯಾರೂ ಅಧಿಕೃತವಾಗಿಯೇ ಇರಲಿಲ್ಲ. 

ಎನ್‌ಡಿಎನಲ್ಲಿರುವ ಎಚ್‌ಡಿಕೆ ಬರ ಪರಿಹಾರಕ್ಕೆ ಒತ್ತಾಯಿಸಲಿ: ಸಿಎಂ ಸಿದ್ದರಾಮಯ್ಯ

ಕೆಲವು ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ದೂರಿದರೆ, ಈಗಿನ ನಿರ್ದೇಶಕರ ನೇಮಕಾತಿಯೇ ಅಕ್ರಮ ಎಂದು ವಿದ್ಯಾರ್ಥಿ, ಹಿರಿಯ ವೈದ್ಯರು ದಾಖಲೆ ಒದಗಿಸಿದರು. ಕ್ರಿಮ್ಸ್‌ನಲ್ಲಿ ನಡೆಯುತ್ತಿರುವ ಚಿತ್ರ-ವಿಚಿತ್ರ ಆಡಳಿತಕ್ಕೆ ಸಚಿವರು, ಶಾಸಕ, ಜಿಲ್ಲಾಧಿಕಾರಿ ಶಾಕ್ ಆದರು. ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಮೊದಲು ಕಾರವಾರದ ಕ್ರಿಮ್ಸ್ ಅನ್ನು ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ಮಂಕಾಳ ವೈದ್ಯ ಕ್ರಿಮ್ಸ್‌‌ನಲ್ಲಿ ವೈದ್ಯರು, ಆಡಳಿತ ಸಿಬ್ಬಂದಿ ಸಭೆ ಕರೆದಿದ್ದರು. 

ಆದರೆ, ಕ್ರಿಮ್ಸ್‌ನಲ್ಲಿ ಹೊಸ ಸೇವೆ ಬರುವುದಿರಲಿ, ಇದ್ದ ಸೇವೆಯನ್ನೇ ಹಾಳು ಮಾಡಿರುವ ಆತಂಕಕಾರಿ ಸಂಗತಿಗಳು ಹೊರಬಿದ್ದವು. ಕಾಲೇಜಿನ ವೈದ್ಯರೊಬ್ಬರು ಸಭೆಯಲ್ಲಿಯೇ ದಾಖಲೆ ಒದಗಿಸಿ ಅಕ್ರಮ ನೇಮಕಾತಿ ಬಯಲು ಮಾಡಿದರೆ, ವಿವಿಧ ವೈದ್ಯರು ಎಚ್‌ಒಡಿ ಸ್ಥಾನ ನೀಡುವಲ್ಲಿ ನಿರ್ದೇಶಕರು ರಾಜಕೀಯ ಮಾಡುತ್ತಿರುವುದನ್ನು ಬಹಿರಂಗಗೊಳಿಸಿದರು. ಇನ್ನು ಹಿರಿಯ ವೈದ್ಯರಿಗೆ ಮಾನ್ಯತೆಯನ್ನೇ ಕೊಡದೆ ಕಿರುಕುಳ ನೀಡಲಾಗುತ್ತಿದೆ. 21 ವಿಭಾಗಕ್ಕೆ ಮುಖ್ಯಸ್ಥರಿದ್ದರೂ, ಅವರಿಗೆ ಮುಖ್ಯಸ್ಥರು ಎಂಬ ಪ್ರಮಾಣ ಪತ್ರವನ್ನೇ ಕೊಟ್ಟಿಲ್ಲ ಎಲ್ಲ ಮುಖ್ಯಸ್ಥರು ದೂರಿದರು.

ಹಲ್ಲಿನ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹುದ್ದೆಗೆ ಅರ್ಹರಿದ್ದರೂ ನಿಯಮ ಉಲ್ಲಂಘಿಸಿ 38 ವರ್ಷ ಮೀರಿದ ವೈದ್ಯೆಯನ್ನು ನೇಮಕ ಮಾಡಲಾಗಿದ್ದು, ನೇಮಕಗೊಂಡ ವೈದ್ಯೆ ಕೂಡ ಅದನ್ನು ಒಪ್ಪಿಕೊಂಡರು. ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಕೂಡಾ ಸಭಾಭವನದ ಬಾಗಿಲ ಬಳಿ ಜಮಾಯಿಸಿ ಕಾಲೇಜಿನಲ್ಲಿ ನಿರ್ದೇಶಕರ ಅಂಧಾ ದರ್ಬಾರ್ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜತೆ ಕಳೆದ ಮೂರು ವರ್ಷಗಳಿಂದ ಇಬ್ಬರು ವೈದ್ಯರು ಕೆಲಸ ಮಾಡದೇ ವೇತನ ಪಡೆಯುತ್ತಿದ್ದಾರೆ ಎಂಬ ಸಂಗತಿಯೂ ಸಭೆಯಲ್ಲಿ ಹೊರಬಿದ್ದಿತು. ನಿರ್ದೇಶಕರ ವಿರುದ್ಧ ಸಂದೀಪ ಎನ್ನುವ ಹಿರಿಯ ವಿದ್ಯಾರ್ಥಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದನು. 

ಎಚ್‌.ಡಿ.ರೇವಣ್ಣ ಕಂಡರೆ ಮೊದಲಿನಿಂದಲೂ ಪ್ರೀತಿ: ಸಿಎಂ ಸಿದ್ದರಾಮಯ್ಯ

ಇದೇ ಕಾರಣಕ್ಕೆ, ಅರ್ಹತೆ ಇದ್ದರೂ ತನ್ನನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಸಂದೀಪ ದಾಖಲೆ ಸಮೇತ ಸಾಬೀತು ಮಾಡಿದ ಸನ್ನಿವೇಶವೂ ಕಂಡು ಬಂತು. ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ಮಾಂಕಾಳು ವೈದ್ಯ, ವೈದ್ಯಾಧಿಕಾರಿಗಳು ಅಹಂಕಾರ ಹಾಗೂ ನಿರ್ಲಕ್ಷ್ಯ ತೋರಿಸಿದ್ದೇ ಇಂತಹ ಘಟನೆಗಳಿಗೆ ಕಾರಣ. ತಪ್ಪಿತಸ್ಥರನ್ನು ಖಂಡಿತಾ ಶಿಕ್ಷಿಸುತ್ತೇವೆ ಹೊರತು ಯಾರನ್ನೂ ಬಿಡುವ ಮಾತಿಲ್ಲ. ಕ್ರಿಮ್ಸ್‌ನ ವ್ಯವಸ್ಥೆಯನ್ನು ಸರಿಪಡಿಸಿ ಮೇಲ್ದರ್ಜೆಗೇರಿಸ್ತೇವೆ. ಅಲ್ಲದೇ, ಸೂಪರ್ ಸ್ಪೆಷಾಲಿಟಿ‌ ಆಸ್ಪತ್ರೆ ಕೂಡಾ ನಿರ್ನಾಣ ಮಾಡ್ತೇವೆ ಎಂದು ಹೇಳಿದರು. ಒಟ್ಟಿನಲ್ಲಿ ಕಾರವಾರದ ಕ್ರಿಮ್ಸ್ ಸಂಸ್ಥೆಯ ಅವ್ಯವಸ್ಥೆಯನ್ನು ಕಂಡು ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಶಾಕ್‌ಗೆ ಒಳಗಾಗಿದ್ದಂತೂ ಸತ್ಯ. ಸಂಸ್ಥೆಯ ಒಳಗೆ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರ ಹಾಗೂ ರಾಜಕೀಯವನ್ನು ಈಗಲೇ ತಡಿಯದೇ ಹೋದಲ್ಲಿ ಜನಸಾಮಾನ್ಯರು ಕೂಡಾ ಇದಕ್ಕೆ ಬಲಿಯಾಗಬೇಕಾಗಬಹುದು ಅನ್ನೋದ್ರಲ್ಲಿ ಎರಡು ಮಾತಿಲ್ಲ.

Follow Us:
Download App:
  • android
  • ios