Opposes To Egg: ಮೊಟ್ಟೆ ಕೈಬಿಡಿ, ಇಲ್ಲವಾದಲ್ಲಿ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಮಾಡುವಂತೆ ಆಗ್ರಹ
* ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ವಿರೋಧ
* ಸರ್ಕಾರದ ವಿರುದ್ಧ ಸಿಡಿದೆದ್ದ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ
* ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಮಾಡುವಂತೆ ಆಗ್ರಹ
ಬೀದರ್, (ಡಿ.13): ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (Government Schools) ವಿದ್ಯಾರ್ಥಿಗಳಿಗೆ (Students) ಮೊಟ್ಟೆ (Egg) ವಿತರಣೆಗೆ ವಿರೋಧ ಹೆಚ್ಚುತ್ತಿದ್ದು, ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಶಾಲೆ ಮತ್ತು ಅಂಗನವಾಡಿಗಳಲ್ಲಿ ಮೊಟ್ಟೆ ಬದಲು ಸತ್ವಯುತ, ಸರ್ವಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು. ಇಲ್ಲವೇ ರಾಜ್ಯಾದ್ಯಂತ ಸಸ್ಯಹಾರಿ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ- ಅಂಗನವಾಡಿಗಳನ್ನು ತೆರೆಯಲು ಹಕ್ಕೊತ್ತಾಯಿಸಿ ಡಿ. 20ರಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದಿಂದ ಬೆಳಗಾವಿಯಲ್ಲಿ (Belagavi) ಸಂತ ಸಮಾವೇಶ ಹಾಗೂ ವಿಧಾನಸೌಧ ಚಲೋ ಚಳವಳಿ(Protest) ಹಮ್ಮಿಕೊಳ್ಳಲಾಗಿದೆ.
Malnutrition In Children : 7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ
ಬೀದರ್‌ನಲ್ಲಿ(Bidar) ಇಂದು (ಸೋಮವಾರ) ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಒಕ್ಕೂಟದ ಪ್ರಧಾನ ಸಂಚಾಲಕ ಶ್ರೀ ದಯಾನಂದ ಸ್ವಾಮೀಜಿ ಮತ್ತು ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮೀಜಿ ಮಾಹಿತಿ ನೀಡಿದರು.
ಕೋಟ್ಯಾಂತರ ಜನರ ಹಿತಾಸಕ್ತಿ, ಧರ್ಮ ಮತ್ತು ಪರಂಪರೆಯನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ, ಸಂವಿಧಾನದ ಆಶಯವೂ ಆಗಿದೆ. ಆದರೆ, ಸಮಾನತೆ ಬೋಧಿಸಬೇಕಾಗಿದ್ದ ಶಿಕ್ಷಣ ಕೇಂದ್ರಗಳಲ್ಲಿ ಪೌಷ್ಠಿಕಾಂಶ ಹೆಸರಿನಲ್ಲಿ ಮೊಟ್ಟೆ ತಿನ್ನಿಸುವುದರ ಮೂಲಕ ಸರ್ಕಾರವೇ ಪರಂಪರೆಯ ಮೇಲೆ ಅಪರೋಕ್ಷವಾಗಿ ಆಕ್ರಮಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಈ ಹಿಂದೆ 1997ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು 2006ರಲ್ಲಿ ಸಮ್ಮಿಶ್ರ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ತೀವ್ರ ಹೋರಾಟದ ಹಿನ್ನಲೆ ಕೈಬಿಟ್ಟಿರುವುದು ಬಿಜೆಪಿ ಸರ್ಕಾರ ಗೊತ್ತಿದೆ. ಆದರೂ ರೈತ ಸಮುದಾಯಕ್ಕೆ ಹೆಚ್ಚು ಲಾಭ ಸಿಗಲು ಅವಕಾಶ ಇರುವ ಸಸ್ಯಹಾರ ಲಭ್ಯ ಇದ್ದರೂ, ಹಠದಿಂದ ಕೇವಲ ಕೆಲವೇ ಪೌಲ್ಟ್ರಿಗಳ ಹಿತಾಸಕ್ತಿಗಾಗಿ ಅನಾರೋಗ್ಯಕರವಾದ ಮೊಟ್ಟೆಯನ್ನು ತಿನ್ನಿಸಲು ಹೊರಟಿದೆ. ಮೊಟ್ಟೆ ಮೂಲಕ ವೋಟ್ ಬ್ಯಾಂಕ್ ಸಿಗಬಹುದು ಎಂಬ ಭ್ರಮೆಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ವಾಮೀಜಿಗಳು, ಮುಂದೆ ಈ ಮೊಟ್ಟೆ ಬಗೆದೀತು ಸರ್ಕಾರದ ಹೊಟ್ಟೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ವಿಜಯಪುರದ ಸಿದ್ದೇಶ್ವರ ಶ್ರೀಗಳು, ಸಿದ್ಧಗಂಗಾ ಮಠದ ಶ್ರೀಗಳು, ಸುತ್ತೂರು ಶ್ರೀಗಳು ಮತ್ತು ಭಾಲ್ಕಿಯ ಶ್ರೀಗಳನ್ನು ಒಳಗೊಂಡಂತೆ ನಾಡಿನ ನೂರಾರು ಮಠಾಧೀಶರು, ಸಂತರು, ಸಸ್ಯಹಾರಿ ಸಮುದಾಯಗಳು ಹಾಗೂ ಸಂಘಟನೆಗಳು ವಿನಂತಿಸಿದರೂ ಸರ್ಕಾರ ಇದಕ್ಕೆ ಕಿವಿಗೊಡದೆ ಮೊಟ್ಟೆ ತಿನ್ನಿಸಲು ಆರಂಭಿಸಿದೆ. ಆ ಮೂಲಕ ಸಸ್ಯಹಾರಿ, ಮಾಂಸಹಾರಿಗಳ ನಡುವೆ ಕಲಹ:, ಸಾಮರಸ್ಯಕ್ಕೆ ಧಕ್ಕೆವುಂಟು ಮಾಡುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದು ಹೇಳಿದರು.
ಮೊಟ್ಟೆ ಪೌಷ್ಠಿಕಾಂಶದಿಂದ ಕೂಡಿರುವುದೋ, ಇಲ್ಲವೋ ಎಂಬುದು ಮುಖ್ಯವಲ್ಲ. ಒಂದೇ ಪಂಕ್ತಿಯಲ್ಲಿ ಮೊಟ್ಟೆ ಸೇವನೆ ಮಾಡುವ ಮಕ್ಕಳ ಜತೆ ಸಸ್ಯಹಾರ ಸೇವಿಸುವ ಮಕ್ಕಳ ಮೇಲೆ ಉಂಟಾಗುವ ಪರಿಣಾಮ, ಜೊತೆಗೆ ರಾಜ್ಯದಲ್ಲಿ ಅನುದಾನಿತ ಶಾಲೆಗಳನ್ನು ನಡೆಸುತ್ತಿರುವ ಮಠಗಳಲ್ಲಿ ಸ್ವತ: ಮಕ್ಕಳಿಗೆ ಸ್ವಾಮಿಗಳೇ ಮೊಟ್ಟೆ ಬೇಯಿಸಿ ತಿನ್ನಿಸುವ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮೊಟ್ಟೆ ವಿತರಣೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಡಿ.19ರೊಳಗೆ ಹಕ್ಕೊತ್ತಾಯಕ್ಕೆ ಮಣಿಯದಿದ್ದರೆ ಡಿ. 20ರಂದು ನೂರಾರು ಮಠಾಧೀಶರು, ಸಾರ್ವಜನಿಕರೊಂದಿಗೆ ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಜೈಲು ಭರೋ ಚಳುವಳಿ ನಡೆಸಲಾಗುವುದು. ನಂತರ ಲಿಂಗಾಯತ ಶಾಸಕರಿಗೆ ಮುತ್ತಿಗೆ ಸೇರಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಮಾತೆ ಸತ್ಯಾದೇವಿ, ವೈಜಿನಾಥ ಕಮಠಾಣೆ ಮತ್ತು ಶಿವರಾಜ ಪಾಟೀಲ ಅತಿವಾಳ ಇನ್ನಿತರರಿದ್ದರು.