ಆತ್ಮಭೂಷಣ್‌, ಕನ್ನಡಪ್ರಭ

ಮಂಗಳೂರು(ಜು.09): ಅಡುಗೆ ಅನಿಲ ಮೇಲಿನ ಸಬ್ಸಿಡಿ ಮೊತ್ತ ಬಿಟ್ಟುಕೊಡುವಂತೆ ಗ್ರಾಹಕರನ್ನು ಕೋರಿದ್ದ ಕೇಂದ್ರ ಸರ್ಕಾರ ಈಗ ಸದ್ದಿಲ್ಲದೆ ಸಿಲಿಂಡರ್‌ ದರ ಇಳಿಕೆಯ ನೆಪದಲ್ಲಿ ಸಬ್ಸಿಡಿ ಮೊತ್ತವನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 

ಯಾವುದೇ ಮಾಹಿತಿ ನೀಡದೆ ಸಬ್ಸಿಡಿ ಸ್ಥಗಿತಗೊಳಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರರಾಗಿರುವ ಮಾಜಿ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಈ ಮೊತ್ತವನ್ನು ಕೇಂದ್ರದ ಉಚಿತ ಗ್ಯಾಸ್‌ ಹಂಚಿಕೆಯ ಉಜ್ವಲ ಯೋಜನೆಗೆ ವರ್ಗಾಯಿಸಿರುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ಒಂದು ಕೈಯಲ್ಲಿ ಸವಲತ್ತು ನೀಡಿ, ಇನ್ನೊಂದು ಕೈಯಲ್ಲಿ ವಾಪಸ್‌ ಪಡೆಯುವುದು ಕೇಂದ್ರದ ಕ್ರಮವಾಗಿದ್ದು ಅದು ಜನತೆಯನ್ನು ನಂಬಿಸಿ ಮೋಸ ಮಾಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸದಿದ್ದಲ್ಲಿ ಕಾಂಗ್ರೆಸ್‌ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌: ಸಚಿವರ ಎದುರು ಕಣ್ಣೀರಿಟ್ಟ ಕೊರೋನಾ ಸೋಂಕಿತರು

ದೇಶಾದ್ಯಂತ ಅಡುಗೆ ಅನಿಲ ಗ್ರಾಹಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತ ಮೇ ತಿಂಗಳಿಂದ ಬ್ಯಾಂಕ್‌ ಖಾತೆಗೆ ಬಿದ್ದಿಲ್ಲ. ಈ ಬಗ್ಗೆ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ಅಧಿಕಾರಿಗಳನ್ನು ಕೇಳಿದರೆ, ಕಳೆದ ಮೂರು ತಿಂಗಳಿಂದ ದರ 600 ರು. ಕೂಡ ದಾಟಿಲ್ಲ. ಹಾಗಾಗಿ ಗ್ರಾಹಕರಿಗೆ ಸಬ್ಸಿಡಿ ಮೊತ್ತ ಪಾವತಿಯಾಗಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಇದೇ ವೇಳೆ ಗ್ಯಾಸ್‌ ಏಜೆನ್ಸಿಗಳ ಪ್ರಕಾರ, ಕಳೆದ ಮೂರು ತಿಂಗಳಿನ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರ, ಹೊಸ ಗ್ಯಾಸ್‌ ಸಂಪರ್ಕದ ಉಜ್ವಲ ಯೋಜನೆಗೆ ವರ್ಗಾಯಿಸಿದೆ. ಉಜ್ವಲ ಯೋಜನೆಯಲ್ಲಿ ಗ್ಯಾಸ್‌ ಸಂಪರ್ಕ ಉಚಿತವಾಗಿದ್ದು, ಸಿಲಿಂಡರ್‌ ಮೊತ್ತವನ್ನು ಕೇಂದ್ರ ನೇರವಾಗಿ ಗ್ರಾಹಕರ ಖಾತೆಗೆ ಜಮೆ ಮಾಡುತ್ತಿದೆ. ಈಗ ಸಿಲಿಂಡರ್‌ ಬೆಲೆ ಕಡಿಮೆಯಾಗಿರುವುದರಿಂದ ಸಬ್ಸಿಡಿ ಮೊತ್ತವನ್ನು ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.