ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶ್ರೀಲಂಕಾ, ನೇಪಾಳ ಮತ್ತು ಜಾರ್ಜಿಯಾ ದೇಶಗಳ ಕೆಲ ಶೆಲ್‌ ಕಂಪನಿಗಳು ಮತ್ತು ಕ್ಯಾಸಿನೊಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು : ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶ್ರೀಲಂಕಾ, ನೇಪಾಳ ಮತ್ತು ಜಾರ್ಜಿಯಾ ದೇಶಗಳ ಕೆಲ ಶೆಲ್‌ ಕಂಪನಿಗಳು ಮತ್ತು ಕ್ಯಾಸಿನೊಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.

ಸೈಬರ್‌ ವಂಚನೆಯ ಹಣವನ್ನು ಬಳಸಿಕೊಂಡು ಕ್ರೆಡಿಟ್‌ ಕಾರ್ಡ್ ಪಾವತಿ ತೋರಿಸುವ ಮುಖಾಂತರ ವೀರೇಂದ್ರಗೆ ಸೇರಿದ ಕ್ಯಾಸಿನೋಗಳ ನಗದು ಹಣವನ್ನು ಕಾನೂನು ಬದ್ಧ ಆದಾಯವಾಗಿ ಪರಿವರ್ತಿಸಿರುವ ಶಂಕೆಯೂ ವ್ಯಕ್ತವಾಗಿದೆ. ಇ.ಡಿ.ಶೋಧನೆ ವೇಳೆ ವೀರೇಂದ್ರ ಸಾಗರೋತ್ತರ ವ್ಯವಹಾರ ನಡೆಸುತ್ತಿರುವ ಸಂಬಂಧ ಕೆಲ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಈ ಶೆಲ್‌ ಕಂಪನಿಗಳು ಹಾಗೂ ಸಾಗರೋತ್ತರ ವ್ಯವಹಾರದ ಬಗ್ಗೆ ಕೆ.ಸಿ.ವೀರೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತ.ನಾಡು ಲಾಟರಿ ಕಿಂಗ್‌ನಿಂದ ಕ್ಯಾಸಿನೋ ಖರೀದಿಗೆ ಯತ್ನ

ಮತ್ತೊಂದೆಡೆ ಕೆ.ಸಿ.ವೀರೇಂದ್ರ ಅವರು ತಮಿಳುನಾಡು ಮೂಲದ ಲಾಟರಿ ಕಿಂಗ್‌ ಸ್ಯಾಂಟಿಯಾಗೋ ಮಾರ್ಟಿನ್‌ನಿಂದ ಕ್ಯಾಸಿನೋ ಖರೀದಿಸಲು ಪ್ರಯತ್ನಿಸಿದ್ದ ಸಂಬಂಧ ಕೆಲ ದಾಖಲೆಗಳನ್ನು ಇ.ಡಿ. ಜಪ್ತಿ ಮಾಡಿದೆ.

ಈಗಾಗಲೇ ಇ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪದ ಮತ್ತೊಂದು ಪ್ರಕರಣದಲ್ಲಿ ಈ ಲಾಟರಿ ಕಿಂಗ್‌ ಮಾರ್ಟಿನ್‌ನನ್ನು ತನಿಖೆಗೆ ಒಳಪಡಿಸಿದ್ದಾರೆ. ಅಂತೆಯೇ ವೀರೇಂದ್ರ ಅವರ ಸಹೋದರ ಕೆ.ಸಿ.ನಾಗರಾಜ್‌ ಮತ್ತು ಅವರ ಮಗ ಪೃಥ್ವಿ ಎನ್‌.ರಾಜ್‌ ಅವರು ಫ್ಯಾನ್ಸಿ ಮತ್ತು ವಿಐಪಿ ನೋಂದಣಿ ಸಂಖ್ಯೆಯ 4 ಐಷಾರಾಮಿ ಕಾರುಗಳ ಖರೀದಿಗೆ ಬಳಸಿರುವ ಹಣದ ಮೂಲ ಕುರಿತು ಇ.ಡಿ. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.