ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಅನುದಾನ ಸಿಗದ ಕಾರಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ ಎಂದು ಅವರು ದೂರಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ (ಫೆ.3): ‘ನನಗೆ ಅಸಮಾಧಾನ ಆಗಿರುವುದು ನಿಜ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡುವೆ. ಆದರೆ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ’ ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಅನುದಾನ ಸಿಗದ ಕಾರಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ ಎಂದೂ ದೂರಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಕಲಬುರಗಿಗೆ ಭಾನುವಾರ ಆಗಮಿಸಿದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಅಸಮಾಧಾನ ಆಗಿರುವುದು ನಿಜ. ಹಾಗಂತ ಎಲ್ಲವನ್ನೂ ಸಾರ್ವಜನಿಕವಾಗಿ ಮಾತನಾಡದೆ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಉಚಿತ ಯೋಜನೆಗಳಿಂದ ಕರ್ನಾಟಕದ ಬಳಿ ದುಡ್ಡೇ ಇಲ್ಲ: ನಿರ್ಮಲಾ ಸೀತಾರಾಮನ್
ಗ್ಯಾರಂಟಿ ಯೋಜನೆಗಳಿಂದ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ. ಹೀಗಾಗಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಇದೊಂದೇ ಅಂತಲ್ಲ, ಇನ್ನೂ ಹಲವು ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ಪತ್ರದಲ್ಲಿ ಸಿಎಂ ಸಿದ್ದರಾಮಯ್ಯಗೆ ಎಲ್ಲವನ್ನೂ ನಾನು ತಿಳಿಸಿದ್ದೇನೆ. ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವೆ. ಆದರೆ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದರು.
ಇದನ್ನೂ ಓದಿ: ಇದನ್ನೂ ಓದಿ:ನೆಹರೂ ಅವಧೀಲಿ ₹12 ಲಕ್ಷಕ್ಕೆ ಶೇ.25ರಷ್ಟು, ಇಂದಿರಾ ಸರ್ಕಾರದಲ್ಲಿ 10 ಲಕ್ಷ ತೆರಿಗೆ ಪಾಲಾಗುತ್ತಿತ್ತು: ಪ್ರಧಾನಿ ಮೋದಿ ತಿರುಗೇಟು
ಇದೇನು ವಿಶೇಷ ಬೆಳವಣಿಗೆ ಅಲ್ಲ. ಯಾವತ್ತೋ ರಾಜೀನಾಮೆ ನೀಡಬೇಕು ಅಂದುಕೊಂಡಿದ್ದೆ. ಈಗ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ರಾಜ್ಯಪಾಲರ ತೂಗು ಕತ್ತಿ ತಲೆಯ ಮೇಲಿತ್ತು. ಹಾಗಾಗಿ, ರಾಜೀನಾಮೆ ನೀಡಲಾಗಿದೆಯೇ ವಿನಃ ಅಸಮಾಧಾನ ಏನೂ ಇಲ್ಲ ಎಂಬುದನ್ನು ನೀವೇ ಸೃಷ್ಟಿಸುತ್ತಿದ್ದೀರಿ ಎಂದು ಮಾಧ್ಯಮಗಳ ಕಡೆಗೆ ಮುಗುಳ್ನಗುತ್ತಾ ಬೊಟ್ಟು ಮಾಡಿದರು.
