ಬೆಂಗಳೂರು (ಸೆ.17):  ರಾಜ್ಯ ಸರ್ಕಾರದ ವೈಫಲ್ಯ, ಜನ ವಿರೋಧಿ ಧೋರಣೆ, ಜನತೆ ಅನುಭವಿಸುತ್ತಿರುವ ಸಂಕಷ್ಟದ ವಿಷಯಗಳನ್ನು ಮರೆ ಮಾಚಲು ಬಿಜೆಪಿ ಸರ್ಕಾರ ಡ್ರಗ್ಸ್‌ ಪ್ರಕರಣವನ್ನು ವೈಭವೀಕರಿಸುತ್ತಿದೆ. ಈ ಪ್ರಕರಣದಲ್ಲೂ ಕೇವಲ ಹಿಟ್‌ ಅಂಡ್‌ ರನ್‌ ಧೋರಣೆ ತೋರಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಆರೋಪಿಸಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯದ ಬಿಜೆಪಿ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯಲು ಯಾವಾಗಲೂ ಮುಂದಿರುತ್ತದೆ. ರಾಜ್ಯದಲ್ಲಿ ಉಂಟಾಗಿರುವ ಕೊರೋನಾ ಹಾವಳಿ, ಪ್ರವಾಹ ಸಂಕಷ್ಟ, ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯಿದೆ, ಶ್ರಮಿಕ ವಿರೋಧಿ ಕಾರ್ಮಿಕ ತಿದ್ದುಪಡಿ ಕಾಯಿದೆಗಳ ಬಗ್ಗೆ ಚರ್ಚೆ ನಡೆಯದೆ ಮರೆಮಾಚಲು ಹುನ್ನಾರ ನಡೆಸಿದೆ’ ಎಂದಿದ್ದಾರೆ.

ನಶೆಯಲ್ಲಿದ್ರಾ ಸೆಲೆಬ್ರಿಟಿಗಳು; ಕರಣ್ ಮನೆಯ ಪಾರ್ಟಿ ವಿಡಿಯೋ ಸತ್ಯ!
 
‘ಡ್ರಗ್ಸ್‌ ಪ್ರಕರಣವನ್ನು ಭೇದಿಸಿ ಮಾಫಿಯಾ ಮಟ್ಟಹಾಕಲು ನಾರ್ಕೊಟಿಕ್‌ ಸೆಲ್‌ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಕಾನೂನನ್ನು ಇನ್ನಷ್ಟುಬಲಿಷ್ಠಗೊಳಿಸುವ ಬದಲು ರಾಜಕೀಯ ಲಾಭಕ್ಕಾಗಿ ಹಿಟ್‌ ಅಂಡ್‌ ರನ್‌ ಕ್ರಮ ಅನುಸರಿಸುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಡಲು ವಿರೋಧಪಕ್ಷದ ಮುಖಂಡರ ಮೇಲೆ ಗೂಬೆ ಕೂರಿಸಲು ಮುಂದಾಗಿದೆ’ ಎಂದು ದೂರಿದರು.

‘ವಾಸ್ತವ ವಿಷಯಗಳನ್ನು ಚರ್ಚೆಗೆ ಬಾರದಂತೆ ನೋಡಿಕೊಳ್ಳುವುದು. ಈ ಮೂಲಕ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಿಜೆಪಿಯ ನಡೆ ನಾಚಿಕೆಗೇಡು’ ಎಂದು ಕಿಡಿ ಕಾರಿದರು.