ಬೆಂಗಳೂರಿನಲ್ಲಿ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ಸುಮಾರು 8 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ‘ಖಾಟ್ ಎಲೆಗಳನ್ನು’ ವಶಪಡಿಸಿಕೊಂಡಿದ್ದಾರೆ. ಇಥಿಯೋಪಿಯಾದಿಂದ ಭಾರತದ ಮೂಲಕ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲ
ನವದೆಹಲಿ/ಬೆಂಗಳೂರು: ಕೆಲವು ತಿಂಗಳ ಹಿಂದೆ ಮೈಸೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಆಗಿತ್ತು. ಇನ್ನು ಕಳೆದ ವಾರವಷ್ಟೇ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ 3 ಡ್ರಗ್ಸ್ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಸುಮಾರು 56 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಹೊಸ ವರ್ಷಕ್ಕೂ ಮುನ್ನ ಬುಧವಾರ ಬೆಂಗಳೂರಿನಲ್ಲಿ ಸುಮಾರು 8 ಕೋಟಿ ರು. ಮೌಲ್ಯದ 160 ಕೆಜಿ ‘ಖಾಟ್ ಎಲೆಗಳು’ ಎಂಬ ಮಾದಕ ವಸ್ತುವನ್ನು ಮಾದಕ ವಸ್ತು ನಿಯಂತ್ರಣ ಮಂಡಳಿಯ (ಎನ್‌ಸಿಬಿ) ಬೆಂಗಳೂರು ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದ ಖಾಟ್ ಎಲೆಗಳ ಕಳ್ಳಸಾಗಣೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
2018ರಲ್ಲಿ ಮಾದಕ ದ್ರವ್ಯಗಳು ಮತ್ತು ಮಾದಕ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಖಾಟ್ ಎಲೆಗಳನ್ನು ಮಾದಕ ವಸ್ತು ಎಂದು ಸೇರಿಸಲಾಗಿತ್ತು. ಇದಾದ ನಂತರ ಇದು ಕರ್ನಾಟಕದಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ನ ಅತಿ ದೊಡ್ಡ ಪ್ರಮಾಣ ಎಂದು ಎನ್‌ಸಿಬಿ ತಿಳಿಸಿದೆ.
ಖಾಟ್ ಒಂದು ಹೂಬಿಡುವ ಪೊದೆ ರೀತಿಯ ಸಸ್ಯ
ಇದರ ಎಲೆಗಳಲ್ಲಿ ಮಾದಕತೆ ಉಂಟುಮಾಡುವ ಅಂಶವಿರುವುದರಿಂದ ತಂಬಾಕಿನ ಎಲೆ ರೀತಿ ಜಗಿಯಲಾಗುತ್ತದೆ. ಭಾರತದಲ್ಲಿ ಇದು ಇನ್ನೂ ಹೆಚ್ಚು ಪ್ರಚಾರ ಪಡೆದಿಲ್ಲ. ಆದರೆ ಇದನ್ನು ವಿದೇಶಗಳಿಂದ ತರಿಸಿಕೊಂಡು ಭಾರತದ ಮೂಲಕ ಇತರ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಎನ್‌ಸಿಬಿ ಹೇಳಿದೆ.
ಆರಂಭಿಕ ತನಿಖೆ ಪ್ರಕಾರ, ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಅಂತಾರಾಷ್ಟ್ರೀಯ ಮಾರ್ಗವನ್ನು ಬಳಸಿಕೊಂಡು ಇದನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಭಾರತ ಮಾರ್ಗವಾಗಿ ವಿದೇಶಗಳಿಗೆ ರವಾನೆ ಆಗುತ್ತಿತ್ತು. ಈ ಸಂಘಟಿತ ಜಾಲ ಇಥಿಯೋಪಿಯಾ, ಕೀನ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ವಿಸ್ತರಿಸಿದೆ ಎಂದು ಅದು ತಿಳಿಸಿದೆ.
ಬೆಂಗಳೂರು ಇವರಿಗೆ ಕಾರ್ಯಸ್ಥಳ
ಈ ಜಾಲ ಸುಮಾರು 2,100 ಕೆಜಿ ತೂಕದ 550ಕ್ಕೂ ಹೆಚ್ಚು ಖಾಟ್ ಎಲೆಗಳ ದಾಸ್ತಾನುಗಳನ್ನು ಉತ್ತರ ಅಮೆರಿಕ, ಯುರೋಪ್, ಕೊಲ್ಲಿ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಖಾಟ್‌ನ ಬೃಹತ್ ಸರಕುಗಳನ್ನು ಆಮದು ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಅಂಚೆ ಮತ್ತು ಕೊರಿಯರ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ದಂಧೆಕೋರರು ಇವನ್ನು ಸಣ್ಣ ಪ್ರಮಾಣದಲ್ಲಿ ವಿತರಿಸಲು ಬೆಂಗಳೂರನ್ನು ಕಾರ್ಯಸ್ಥಳವನ್ನಾಗಿ ಮಾಡಿಕೊಂಡಿದ್ದರು. ಇಲ್ಲಿ ಖಾಟ್ ಎಲೆಗಳ ಸಂಗ್ರಹಣೆ ಮತ್ತು ವಿತರಣೆಯ ಕೆಲಸ ನಡೆಯುತ್ತಿತ್ತು. ಇದರಲ್ಲಿ ಪ್ರಮುಖವಾಗಿ ವಿದೇಶಿ ಪ್ರಜೆಗಳ ಪಾತ್ರವಿದ್ದು, ಸ್ಥಳೀಯ ಸಹಾಯ ಪಡೆಯಲಾಗುತ್ತಿತ್ತು. ವಿದ್ಯಾರ್ಥಿ ಮತ್ತು ವೈದ್ಯಕೀಯ ವೀಸಾಗಳ ಸೋಗಿನಲ್ಲಿ ಭಾರತದಲ್ಲಿ ವಾಸಿಸುವ ಹಲವಾರು ಸದಸ್ಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


