ಬೆಂಗ​ಳೂ​ರು/ ​ಮೈ​ಸೂ​ರು :  ಸಿದ್ದ​ರಾ​ಮಯ್ಯ ಅವರ ಆಪ್ತ ಶಾಸ​ಕರು ನೀಡಿದ ಸಮ್ಮಿಶ್ರ ಸರ್ಕಾ​ರಕ್ಕೆ ಮುಜು​ಗರ ತರುವ ಹೇಳಿಕೆಗಳ ಬಗ್ಗೆ ಕಾಂಗ್ರೆಸ್‌ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಹಾಗೂ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೆಂಡಾ​ಮಂಡ​ಲ​ರಾ​ದರೆ, ಉಪ ಮುಖ್ಯ​ಮಂತ್ರಿ ಡಾ.ಜಿ.ಪರ​ಮೇ​ಶ್ವರ್‌, ಸಿದ್ದ​ರಾ​ಮಯ್ಯ ಸೇರಿ​ದಂತೆ ಉಳಿದ ನಾಯ​ಕರು ಪರೋ​ಕ್ಷ​ವಾಗಿ ತಮ್ಮ ಶಾಸ​ಕ​ರನ್ನು ಸಮ​ರ್ಥಿ​ಸಿ​ಕೊಂಡಿದ್ದಾರೆ.

ಬೆಂಗ​ಳೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಜಿ.ಪರ​ಮೇ​ಶ್ವರ್‌ ಅವರು, ಬಿಡಿಎ ಅಧ್ಯಕ್ಷ ಎಸ್‌.ಟಿ. ಸೋಮ​ಶೇ​ಖರ್‌ ಸರ್ಕಾ​ರದ ಬಗ್ಗೆ ನೀಡಿದ ಹೇಳಿ​ಕೆ​ಯನ್ನು ತಪ್ಪಾಗಿ ಅರ್ಥೈ​ಸ​ಲಾ​ಗಿದೆ. ಅವರು ಬೇರೆ ಅರ್ಥ​ದಲ್ಲಿ ಹೇಳಿರ​ಬ​ಹುದು. ಇದಕ್ಕೆ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ಆ ಕ್ಷಣದ ಪ್ರತಿ​ಕ್ರಿ​ಯೆ​ಯಾಗಿ ರಾಜೀ​ನಾಮೆ ಮಾತು ಆಡಿ​ರ​ಬ​ಹುದು. ಆದರೆ, ಈ ಬಗ್ಗೆ ನಾನು ಅವ​ರೊಂದಿಗೆ ಮಾತ​ನಾ​ಡಿ​ದ್ದೇನೆ. ಸ್ವಲ್ಪ ಬೇಜಾ​ರಾ​ಗಿತ್ತು ಅಷ್ಟೇ ಎಂದು ಅವರು ನನಗೆ ತಿಳಿ​ಸಿ​ದ್ದಾರೆ. ಇಷ್ಟಕ್ಕೂ ಇದು ಸಣ್ಣ ವಿಚಾರ. ಮಾಧ್ಯ​ಮ​ಗಳು ದೊಡ್ಡದು ಮಾಡ​ಬಾ​ರದು ಎಂದ​ರು.

ಮುಖ್ಯ​ಮಂತ್ರಿ​ಯ​ವ​ರಿಗೆ ನಮ್ಮ ಶಾಸ​ಕರ ಕೆಲ ಹೇಳಿ​ಕೆ​ಯಿಂದ ಸ್ವಲ್ಪ ನೋವಾ​ಗಿ​ರ​ಬ​ಹುದು. ಆದರೆ, ರಾಜೀ​ನಾ​ಮೆ​ಯಂತಹ ಹಂತಕ್ಕೆ ಹೋಗುವ ಅಗ​ತ್ಯ​ವೇ​ನಿಲ್ಲ. ಸೋಮ​ಶೇಖರ್‌ ಹಿಂದಿನ ಸರ್ಕಾ​ರ​ದಲ್ಲಿ ನಡೆದ ಅಭಿ​ವೃದ್ಧಿ ಬಗ್ಗೆ ಹೇಳಿ​ರ​ಬ​ಹುದು. ಬೆಂಗ​ಳೂರು ನಗರ ಸಚಿ​ವ​ನಾಗಿ ನನಗೆ ಈ ಸರ್ಕಾ​ರ​ದಲ್ಲೂ ಎಷ್ಟುಅಭಿ​ವೃದ್ಧಿ ನಡೆ​ದಿದೆ ಎಂಬುದು ಗೊತ್ತು. 8 ಸಾವಿರ ಕೋಟಿ ರು. ಆ್ಯಕ್ಷನ್‌ ಪ್ಲಾನ್‌ ಆಗಿದೆ. ಎರಡು ಸರ್ಕಾ​ರ​ಗ​ಳಲ್ಲೂ ಬೆಂಗ​ಳೂ​ರಿನಲ್ಲಿ ಅಭಿ​ವೃದ್ಧಿ ಕಾರ್ಯ ನಡೆ​ದಿದೆ ಎಂದರು.

ಇನ್ನು ಕೆಲ ಶಾಸ​ಕರು ಸಿದ್ದ​ರಾ​ಮಯ್ಯ ಅವರೇ ನಮಗೆ ಮುಖ್ಯ​ಮಂತ್ರಿ ಎಂದಿ​ರ​ಬ​ಹುದು. ಕಳೆದ ಐದು ವರ್ಷ ಅವರೇ ಮುಖ್ಯ​ಮಂತ್ರಿ​ಯಾ​ಗಿ​ದ್ದರು. ಅಲ್ಲದೆ, ಸಿದ್ದ​ರಾ​ಮಯ್ಯ ನಮ್ಮ ಶಾಸ​ಕಾಂಗ ಪಕ್ಷದ ನಾಯ​ಕರು ಕೂಡ. ಹೀಗಾಗಿ ನಮ್ಮ ಶಾಸ​ಕರು ಈ ಮಾತು ಹೇಳಿ​ರ​ಬ​ಹುದು. ಆದರೆ, ಸಿದ್ದ​ರಾ​ಮಯ್ಯ ಎಲ್ಲೂ ನಾನು ಮುಖ್ಯ​ಮಂತ್ರಿ ಎಂದಿಲ್ಲ. ನಾವ್ಯಾರೂ ಸಿದ್ದ​ರಾ​ಮಯ್ಯ ಮುಖ್ಯ​ಮಂತ್ರಿ ಎಂದು ಹೇಳಿಲ್ಲವಲ್ಲ ಎಂದು ಸಮ​ರ್ಥನೆ ನೀಡಿ​ದರು.

ಕಾಂಗ್ರೆಸ್‌ ನಾಯಕ ಇಬ್ರಾಹಿಂ ಮಾತ​ನಾ​ಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ಅಸಮಾಧಾನ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಮುಂದುವರೆಯಬೇಕು. ತಮ್ಮ ತಂದೆ ದೇವೇಗೌಡರಂತೆ ಹೆಚ್ಚಿನ ತಾಳ್ಮೆಯ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾ​ರ​ದಲ್ಲಿ ಗೊಂದ​ಲ​ವಿ​ಲ್ಲ- ಸಿದ್ದು:  ಮೈಸೂ​ರಿ​ನಲ್ಲಿ ಮಾತ​ನಾ​ಡಿದ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷ​ದ ನಾಯಕ ಸಿದ್ದ​ರಾ​ಮಯ್ಯ ಅವರು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡುವ ಹೇಳಿಕೆ ನೀಡಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿ​ದ​ರು.

ಇನ್ನು ಸಮ್ಮಿಶ್ರ ಸರ್ಕಾ​ರದ ಬಗ್ಗೆ ಹೇಳಿಕೆ ನೀಡ​ದಂತೆ ಕಾಂಗ್ರೆಸ್‌ ಶಾಸ​ಕ​ರನ್ನು ಆ ಪಕ್ಷದ ನಾಯ​ಕರೇ ಕಂಟ್ರೋಲ್‌ ಮಾಡ​ಬೇಕು ಎಂಬ ಕುಮಾ​ರ​ಸ್ವಾಮಿ ಹೇಳಿ​ಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ನಮ್ಮ ಶಾಸಕರನ್ನು ನಾವೇ ಕಂಟ್ರೋಲ್‌ ಮಾಡಬೇಕು. ಇನ್ನೇನು ಜೆಡಿಎಸ್‌ನವರು ಕಂಟ್ರೋಲ್‌ ಮಾಡಲು ಆಗುತ್ತಾ ಎಂದು ಪ್ರಶ್ನಿ​ಸಿ​ದ​ರು.

ನಾವು ಮೈತ್ರಿ ಸರ್ಕಾರ ರಚಿಸಿದ್ದೇವೆ. ಜೆಡಿಎಸ್‌ನವರೇ ಮುಖ್ಯಮಂತ್ರಿ ಆಗಲಿ ಎಂದಿದ್ದೇವೆ. ಹೀಗಾಗಿ, ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆ ಇಲ್ಲಿ ಉದ್ಭವ ಆಗುವುದಿಲ್ಲ. ಎಸ್‌.ಟಿ. ಸೋಮಶೇಖರ್‌ ಅವರಿಗೆ ಕೆಪಿಸಿಸಿಯಿಂದ ನೋಟಿಸ್‌ ನೀಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲರ ಜೊತೆ ಮಾತನಾಡಿ ಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.