- Home
- News
- State
- ದೇಶಕ್ಕಾಗಿ ಒಲಂಪಿಕ್ಸ್ ಪದಕ ಗೆದ್ದ ಪ್ರಸಾದ್ ಈಗ ಹೌಸ್ ಕೀಪಿಂಗ್ ನೌಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ನರಕವಾದ ಬದುಕು!
ದೇಶಕ್ಕಾಗಿ ಒಲಂಪಿಕ್ಸ್ ಪದಕ ಗೆದ್ದ ಪ್ರಸಾದ್ ಈಗ ಹೌಸ್ ಕೀಪಿಂಗ್ ನೌಕರ; ಸರ್ಕಾರದ ನಿರ್ಲಕ್ಷ್ಯಕ್ಕೆ ನರಕವಾದ ಬದುಕು!
2015ರ ವಿಶೇಷ ಒಲಂಪಿಕ್ಸ್‌ನಲ್ಲಿ ಅಮೇರಿಕಾದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ವಿಶೇಷ ಚೇತನ ಪ್ರತಿಭೆ ಆರ್. ಪ್ರಸಾದ್, ಇಂದು ಯಾವುದೇ ಸರ್ಕಾರಿ ಪ್ರೋತ್ಸಾಹವಿಲ್ಲದೆ ಜೀವನ ಸಾಗಿಸಲು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ನರಕಸದೃಶ ಜೀವನ ನಡೆಸುತ್ತಿದ್ದಾರೆ.

ಪದಕ ಗೆದ್ದು ತಂದ ಈ ಸಾಧಕ
ಕಳೆದ 2015ರಲ್ಲಿ ಅಮೇರಿಕಾದಲ್ಲಿ ನಡೆದ ವಿಶೇಷ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕಾಗಿ 'ಪದಕವನ್ನು ಗೆದ್ದು ತಂದ ಈ ಸಾಧಕ' ಆರ್. ಪ್ರಸಾದ್ ಇಂದು ಬದುಕು ಸಾಗಿಸಲು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಬೇರೊಬ್ಬರು ಮಾಡಿದ ಕಲ್ಮಶವನ್ನು ಸ್ವಚ್ಛಗೊಳಿಸಿ ಜೀವನ ಸಾಗಿಸುತ್ತಿದ್ದಾರೆ.
ಕ್ರೀಡಾಪಟುವಿನ ಹೊಟ್ಟೆ ತುಂಬಿಸುವುದಿಲ್ಲ
ದೇಶಕ್ಕಾಗಿ ಆಟ ಆಡುವಾಗ ಮೈದಾನದಲ್ಲಿ ಸಿಗುವ ಚಪ್ಪಾಳೆ, ಪದಕ ಗೆದ್ದಾಗ ಸಿಗುವ ಹಾರ-ತುರಾಯಿಗಳು ಕ್ರೀಡಾಪಟುವಿನ ಹೊಟ್ಟೆ ತುಂಬಿಸುವುದಿಲ್ಲ ಎಂಬುದಕ್ಕೆ ಅಂತರಾಷ್ಟ್ರೀಯ ಕ್ರೀಡಾಪಟು ಪ್ರಸಾದ್ (ರಾಜೀವ್) ಅವರ ಬದುಕು ಸಾಕ್ಷಿಯಾಗಿದೆ.
ಯಾರು ಈ ಪ್ರಸಾದ್?
ಪ್ರಸಾದ್ ಅವರು ವಿಶೇಷ ಚೇತನ ಪ್ರತಿಭೆಯಾಗಿದ್ದರೂ, ಕ್ರೀಡಾ ಲೋಕದಲ್ಲಿ ಅವರು ಮಾಡದ ಸಾಧನೆ ಇಲ್ಲ. 1994 ರಲ್ಲಿ ಕ್ರೀಡಾ ಜೀವನ ಆರಂಭಿಸಿದ ಇವರು, ಹ್ಯಾಂಡ್ ಬಾಲ್, ಕ್ರಿಕೆಟ್ ಹಾಗೂ ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದರು. ಭಾರತದ ವಿಶೇಷ ಹ್ಯಾಂಡ್ ಬಾಲ್ ತಂಡದ ಗೋಲ್ ಕೀಪರ್ ಆಗಿ ಇವರು ನೀಡಿದ ಪ್ರದರ್ಶನ ಮರೆಯಲಾಗದ್ದು.
ಪದಕಗಳ ಸರದಾರನಿಗೆ ಸಿಗದ ಪ್ರೋತ್ಸಾಹ
ಪ್ರಸಾದ್ ಇದುವರೆಗೆ 9 ಬಾರಿ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಮತ್ತು 12 ಬಾರಿ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಹತ್ತಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಸಾಧನೆಯ ಶಿಖರವೆಂದರೆ 2015 ರಲ್ಲಿ ಅಮೇರಿಕಾದಲ್ಲಿ ನಡೆದ ವಿಶೇಷ ಒಲಂಪಿಕ್ಸ್ (Special Olympics).
ಕ್ರೀಡಾ ಪ್ರೋತ್ಸಾಹ ಧನ
ಆದರೆ, ಪ್ರಸಾದ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೂ ಸಹ, ಸರ್ಕಾರ ಮಾತ್ರ ಈ ಪ್ರತಿಭೆಯನ್ನು ಮರೆತೇ ಬಿಟ್ಟಿದೆ. ಸಣ್ಣ ಉದ್ಯೋಗವಾಗಲಿ ಅಥವಾ ಕ್ರೀಡಾ ಪ್ರೋತ್ಸಾಹ ಧನವಾಗಲಿ ಇವರಿಗೆ ಸಿಕ್ಕಿಲ್ಲ.
ಆತನ ಕುಟುಂಬದ ಹಿನ್ನೆಲೆ
ಕ್ರೀಡಾಕೂಟದಲ್ಲಿ ಆಡುವಾಗ ಇಡೀ ದೇಶದ ಜನತೆ ಪ್ರಸಾದ್ ಅವರ ಆಟದ ವೈಖರಿಯನ್ನು ನೋಡಿ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದ್ದರು. ಸರ್ಕಾರದಿಂದ ಆತನ ಆಟವನ್ನು ಮೆಚ್ಚಿ ಸ್ಪರ್ದೆಗೆ ಕಳಿಸಲಾಯಿತೇ ವಿನಃ ಆತನ ಕುಟುಂಬದ ಹಿನ್ನೆಲೆ ನೋಡಿ ಅವರು ಜೀವನ ಕಟ್ಟಿಕೊಳ್ಳುವುದಕ್ಕೆ ಒಂದು ಕೆಲಸ ನೀಡುವ ಗೋಜಿಗೆ ಹೋಗಲೇ ಇಲ್ಲ.
70 ರ ಹರೆಯದ ತಂದೆಯ ಹೋರಾಟ
ಮಗ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದರೂ ಆರ್ಥಿಕ ಸಂಕಷ್ಟ ಕುಟುಂಬವನ್ನು ಬಿಟ್ಟಿಲ್ಲ. ಪ್ರಸಾದ್ ಅವರ 70 ವರ್ಷದ ವಯೋವೃದ್ಧ ತಂದೆ ರಾಮು ಅವರು ಇಂದಿಗೂ ಸೈಕಲ್ ಮೇಲೆ ಬಟ್ಟೆಗಳನ್ನು ಹೊತ್ತು ವ್ಯಾಪಾರ ಮಾಡಿ ಮಗನನ್ನು ಸಲಹುತ್ತಿದ್ದಾರೆ.
ಹೌಸ್ ಕೀಪಿಂಗ್ ಕೆಲಸ
ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದರೂ ಸಹ ಮಗ (ಪ್ರಸಾದ್) ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಅವರ ತಂದೆ ಸೈಕಲ್ ಮೇಲೆ ವ್ಯಾಪಾರ ಮಾಡುತ್ತಿದ್ದಾರೆ. ಸರ್ಕಾರವು ಇನ್ನಾದರೂ ಎಚ್ಚೆತ್ತುಕೊಂಡು ಈ ಅಂತರಾಷ್ಟ್ರೀಯ ಸಾಧಕನಿಗೆ ಸೂಕ್ತ ಉದ್ಯೋಗ ಅಥವಾ ಆರ್ಥಿಕ ನೆರವು ನೀಡಬೇಕು ಎಂದು ಪ್ರಸಾದ್ ಕುಟುಂಬವು ಸುವರ್ಣ ನ್ಯೂಸ್ ಮೂಲಕ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

