ಬೆಂಗಳೂರು (ಮೇ.10): ರಾಜ್ಯದಲ್ಲಿ ಇಂದಿನಿಂದ ಲಾಕ್‌ಡೌನ್ ಜಾರಿಮಾಡಲಾಗಿದೆ. ಆದರೆ ಇದು ಸಂಪೂರ್ಣ ಲಾಕ್‌ಡೌನ್ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಜಾರಿ ಮಾಡಿರುವುದು ಸಂಪೂರ್ಣ ಲಾಕ್ ಡೌನ್ ಅಲ್ಲ. ನನ್ನ ಅಭಿಪ್ರಾಯದಲ್ಲಿ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಲಾಕ್ ಮಾಡಿದ ರಾಜ್ಯಗಳಲ್ಲಿ ಕೊರೋನಾ ಕಡಿಮೆಯಾಗಿದೆ ಎಂದರು.

ಬಡವರಿಗೆ ಹಣ-ಅಕ್ಕಿ, ಉದ್ಯೋಗಕ್ಕೂ ಆದ್ಯತೆ ನೀಡಿ : ಸಿಎಂಗೆ ಸಿದ್ದರಾಮಯ್ಯ ಸಲಹೆ

ಆಂಧ್ರಪ್ರದೇಶ, ದೆಹಲಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿದ ಪರಿಣಾಮ ಪ್ರಕರಣಗಳು ಕಡಿಮೆಯಾಗುತ್ತಿವೆ. ರಾಜ್ಯದಲ್ಲಿ ಅದೇ ರೀತಿಯ ಪೂರ್ಣ ಪ್ರಮಾಣದ ಲಾಕ್‌ಡೌನ್ ಮಾಡಬೇಕು ಎಂದರು

ಕೋವಿಡ್ ಟೆಸ್ಟ್ : ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದೆ. ಆದರೆ ಕೊರೋನ ಟೆಸ್ಟ್ ಸಮರ್ಪಕವಾಗಿ ಆಗುತ್ತಿಲ್ಲ.  ಹೆಚ್ಚು ರೋಗಿಗಳು ಪತ್ತೆ ಆಗಬಾರದು ಎಂದು ಟೆಸ್ಟ್ ಜಾಸ್ತಿ ಮಾಡ್ತಿಲ್ಲ. ಪರೀಕ್ಷೆ ಹೆಚ್ಚಾದರೆ ಪ್ರಕರಣಗಳು ಹೆಚ್ಚಾಗಿಯೇ ಬರುತ್ತವೆ. ಪರೀಕ್ಷೆಯಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. 

ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗ.  ಕಡ್ಡಾಯವಾಗಿ ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ನಿಮ್ಮ ರಕ್ಷಣೆ ಜತೆಗೆ ಬೇರೆಯವರ ರಕ್ಷಣೆ ಸಹ ಮಾಡಿ ಎಂದರು.  

ಲಸಿಕೆ :  ಇನ್ನು ಕೊರೋನಾ ಮಹಾಮಾರಿಕೆ ಲಸಿಕೆಯೊಂದೇ ಶಾಶ್ವತ ಪರಿಹಾರವಾಗಿದ್ದು,  ತಪ್ಪದೇ ಹಾಕಿಸಿಕೊಳ್ಳಿ. ಕೋ ವ್ಯಾಕ್ಸಿನ್ ಅಥವಾ ಕೋವಿಶಿಲ್ಡ್ ಯಾವುದನ್ನಾದರೊಂದು ಹಾಕಿಸಿಕೊಳ್ಳಿ.  ಸರ್ಕಾರ ಎಲ್ಲರಿಗೂ ವ್ಯಾಕ್ಸಿನ್ ಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಆಗಿದೆ. ಕೂಡ  ಸಮಸ್ಯೆ ಬಗೆಹರಿಸಬೇಕು ಎಂದು ಸಿದ್ದರಾಮಯ್ಯ  ಹೇಳಿದರು. 

ಮೋದಿ ಇನ್ನಾದರೂ ಬುದ್ಧಿ ಕಲಿತು ಆಕ್ಸಿಜನ್‌ ಕೊಡಲಿ: ಸಿದ್ದರಾಮಯ್ಯ .

ಆಕ್ಸಿಜನ್ ಪೂರೈಕೆ :  ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ಜನ ಆಕ್ಸಿಜನ್ ಕೊರತೆಯಿಂದ ಸಾಯುತ್ತಿದ್ದಾರೆ. ಆಕ್ಸಿಜನ್ ಸಕಾಲದಲ್ಲಿ ಸಿಕ್ಕರೆ ಅನೇಕ ಜೀವಗಳು ಉಳಿಯುತ್ತದೆ.  ಆಕ್ಸಿಜನ್ ಇಲ್ಲದೇ ದಾರಿಯಲ್ಲಿ ಬರುವಾಗ, ಆಸ್ಪತ್ರೆ ಕಾರಿಡರ್, ರಸ್ತೆ, ಆಂಬುಲೆನ್ಸ್, ಆಟೋದಲ್ಲಿ ಪ್ರಾಣ ಕಳೆದುಕೊಂಡರು ಎನ್ನುವ ಸುದ್ದಿಗಳು ಬರುತ್ತಿದೆ. ಇದನ್ನೆಲ್ಲಾ ತಪ್ಪಿಸುವ ಸಲುವಾಗಿ ಸರ್ಕಾರ ಕೆಲಸ ಮಾಡುವ ಅಗತ್ಯವಿದೆ.  

ಆಹಾರ ಧಾನ್ಯ ವಿತರಣೆ : ರಾಜ್ಯದ ಜನರಿಗೆ ಪಡಿತರದಲ್ಲಿ ಮಣ್ಣು ಕಲ್ಲು ಇರುವ ರಾಗಿಯನ್ನು ಸರ್ಕಾರ ಕೊಡುತ್ತಿದೆ.  ಬಡವರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕು. ಉತ್ಪಾದಕರನ್ನ ಉಳಿಸಿಕೊಳ್ಳಲು ಸರ್ಕಾರ ಅವರ ಕೈಗೆ ಹಣ ಕೊಡಬೇಕು. ಆರ್ಥಿಕ ಸಹಾಯ ಮಾಡಬೇಕು. ಆಂದ್ರಪ್ರದೇಶ,ಕೇರಳದಲ್ಲಿ ಪ್ಯಾಕೇಜ್ ಕೊಟ್ಟಿದ್ದಾರೆ.  ಇಲ್ಲೂ ಸಹ ಕೊಡಬೇಕು ಎಂದು ಒತ್ತಾಯ ಮಾಡುತ್ತೇನೆ. ಆದರೆ ಈ ಸರ್ಕಾರದಲ್ಲಿ ಬದ್ಧತೆ ಕಾಣುತ್ತಿಲ್ಲ.  ಈ ಸರ್ಕಾರ ಯಾವುದೇ ಪ್ರಿಪರೇಷನ್ ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. 

ಸುಪ್ರೀಂ ಆದೇಶಕ್ಕೂ ಡೋಂಟ್ ಕೇರ್ : ರಾಜ್ಯದಲ್ಲಿ ಆಕ್ಸಿಜನ್  ಕೊರತೆ ಎದುರಾಗಿದ್ದು, ಆಕ್ಸಿಜನ್ ಸಮಸ್ಯೆ ಬಗೆಹರಿಸಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್ ಹೇಳಿದರೂ ಹೆಚ್ಚುವರಿ ಆಕ್ಸಿಜನ್ ಕೊಡುತ್ತಿಲ್ಲ.  ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗಿದ್ದನ್ನ ಬಳಸಿಕೊಳ್ಳಿ ಎಂದು ಹೇಳಬೇಕಿತ್ತು. ಕೇಂದ್ರ ಸರ್ಕಾರಕ್ಕೂ ಬದ್ಧತೆ ಇಲ್ಲ. ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona