ಮೋದಿ ಇನ್ನಾದರೂ ಬುದ್ಧಿ ಕಲಿತು ಆಕ್ಸಿಜನ್ ಕೊಡಲಿ: ಸಿದ್ದರಾಮಯ್ಯ
ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರದಿಂದ ಜೀವದ ಜತೆ ಚೆಲ್ಲಾಟ| ರಾಜ್ಯದ ಜನರ ಜೀವವನ್ನು ಸುಪ್ರೀಂ ಉಳಿಸಿದೆ| ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನು 1500 ಮೆಟ್ರಿಕ್ ಟನ್‌ಗೆ ಹೆಚ್ಚಿಸುವಂತೆ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯದ 25 ಜನ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು: ಸಿದ್ದು|
ಬೆಂಗಳೂರು(ಮೇ.08): ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಆಕ್ಸಿಜನ್ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದ ಸಾವಿರಾರು ರೋಗಿಗಳ ಜೀವವನ್ನು ಸುಪ್ರೀಂ ಕೋರ್ಟ್ ಉಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇನ್ನಾದರೂ ಬುದ್ಧಿ ಕಲಿತು ರಾಜ್ಯಕ್ಕೆ ಆಮ್ಲಜನಕ ಪೂರೈಸಲಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕರ್ನಾಟಕಕ್ಕೆ ನಿತ್ಯ 1600 - 1700 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ಆದರೆ ಕೇಂದ್ರ ಸರ್ಕಾರ 965 ಮೆಟ್ರಿಕ್ ಟನ್ ಮಾತ್ರ ನಿಗದಿ ಮಾಡಿತ್ತು. ರಾಜ್ಯದಲ್ಲಿ ಜನ ಜೀವ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ್ದ ಹೈಕೋರ್ಟ್ 1200 ಮೆಟ್ರಿಕ್ ಟನ್ ಆಮ್ಲಜನಕ ಒದಗಿಸುವಂತೆ ಆದೇಶಿಸಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರ ಈ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗುವ ಮೂಲಕ ರಾಜ್ಯದ ಜನತೆಯ ಜೀವದ ಜತೆ ಚೆಲ್ಲಾಟವಾಡುವ ಕ್ರೌರ್ಯ ಮೆರೆದಿತ್ತು ಎಂದು ಕಿಡಿಕಾರಿದ್ದಾರೆ.
"
ಹೆಚ್ಚು ಆಕ್ಸಿಜನ್ ನೀಡಿ; ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕದ ತಟ್ಟಿದ ಕೇಂದ್ರ!
ರಾಜ್ಯದ ಆಕ್ಸಿಜನ್ ಇಲ್ಲಿಯೇ ಬಳಕೆಯಾಗಲಿ:
ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಸಂಪೂರ್ಣ ಇಲ್ಲಿಯೇ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಹಾಗೂ ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನು 1500 ಮೆಟ್ರಿಕ್ ಟನ್‌ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯದ 25 ಜನ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona