ಕೊರೋನಾ ನಿಯಂತ್ರಣಕ್ಕೆ ನಾಳೆಯಿಂದಲೇ ರಾಜ್ಯದಲ್ಲಿ ಕಠಿಣ  ಕ್ರಮ ಜಾರಿ  ಸಿಎಂ ಬಿ.ಎಸ್ ಯಡಿಯೂರಪ್ಪಗೆ  ಕೋವಿಡ್ ಕಾಲಕ್ಕೆ ಸಲಹೆಗಳನ್ನು ನೀಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ  ಆಹಾರ, ಆರೋಗ್ಯ, ಉದ್ಯೋಗದ ಸುಧಾರಣೆ ಬಗ್ಗೆ ಪತ್ರದಲ್ಲಿ ತಿಳಿಸಿದ ಮಾಜಿ ಸಿಎಂ

ಬೆಂಗಳೂರು (ಮೇ.09): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಮರಣ ಪ್ರಮಾಣವೂ ಏರುತ್ತಿದ್ದು ಸರ್ಕಾರ ಈ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ನಾಳೆಯಿಂದ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ವೇಳೆ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಗತ್ಯ ಸಲಹೆ ನೀಡಿದ್ದಾರೆ. 

ಸಿಎಂ ಬಿ.ಎಸ್ ಯಡಿಯೂರಪ್ಪಗೆ ಇಂದು ಕೋವಿಡ್ ಕಾಲಕ್ಕೆ ಸಲಹೆಗಳನ್ನು ನೀಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಯಾವ ರೀತಿ ಕ್ರಮ ಕೈಗೊಂಡು ಕೊರೋನಾ ನಿಯಂತ್ರಣ ಮಾಡಬೇಕು. ಜನಜೀವನ ಸುಧಾರಣೆ ಹೇಗಿರಬೇಕು ಎನ್ನುವ ಬಗ್ಗೆ ಪತ್ರದ ಮುಖೇನ ತಿಳಿಸಿದ್ದಾರೆ.

ನಾಳೆಯಿಂದ ಸೆಮಿ ಲಾಕ್ಡೌನ್‌, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ .

ಆಕ್ಸಿಜನ್ ನಿರ್ವಹಣೆ : ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಪೂರ್ಣವಾಗಿ ಇಲ್ಲಿಯೇ ಉಳಿಸಿಕೊಳ್ಳಬೇಕು. ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕು. ಆಕ್ಸಿಜನ್ ಸಿಲಿಂಡರುಗಳ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಗೆ ಸಂಪೂರ್ಣ ಬ್ರೇಕ್ ಹಾಕಿ, ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಆಕ್ಸಿಜನ್ ಸಿಗುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.

ಅಲ್ಲದೇ ಆಕ್ಸಿಜನ್ ಉತ್ಪಾದನೆ ಆಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸುವುದರಿಂದ ಸರಬರಾಜಿನ ವೇಳೆ ಆಗುವ ಅನಾಹುತಗಳನ್ನು ತಡೆಯಬಹುದೆಂದು ಕೈ ನಾಯಕ ಸೂಚಿಸಿದ್ದಾರೆ.

ಚಿಕಿತ್ಸಾ ವಿಧಾನ : ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು. ಖಾಸಗಿ ಆಸ್ಪತ್ರೆಯವರು ರೆಮ್‍ಡಿಸಿವಿರ್ ಔಷಧಿ ತರುವಂತೆ ರೋಗಿಗಳಿಗೆ ಹೇಳುತ್ತಿದ್ದಾರೆ. ಆದರೆ ಇದರ ಲಭ್ಯತೆ ಸುಲಭವಾಗಿ ಇಲ್ಲದೆ ಬಡರೋಗಿಗಳು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರತೆಯಾಗಲು ಕ್ರಮ ಕೈಗೊಳ್ಳಬೇಕು.

ಜೀವರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಯಾವುದೇ ಮುಲಾಜಿಲ್ಲದೇ ಕಾನೂನು ರೀತಿ ಕ್ರಮ ಜರುಗಿಸಬೇಕು. ಲಸಿಕೆ ಹಾಕಿಸಿಕೊಳ್ಳದವರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ: ರಸ್ತೆಗಿಳಿದವರಿಗೆ ಬೆತ್ತದೇಟು! .

ತಾತ್ಕಾಲಿಕವಾಗಿ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡಲು ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೆಲುಗಳು ಮುಂತಾದವುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ್ದಾರೆ. 

ಸಾಮಾನ್ಯ ಜನಜೀವನ ಸುಧಾರಣೆ : ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ ವಿತರಣೆ ಮಾಡಿ ಆಹಾರದ ಕೊರತೆ ನೀಗಿಸಿ. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ ರು.10,000 ನೀಡಬೇಕು. ನಂತರ ತಿಂಗಳಿಗೆ ರು. 6,000 ನೀಡಬೇಕು. 

ಮೋದಿ ಇನ್ನಾದರೂ ಬುದ್ಧಿ ಕಲಿತು ಆಕ್ಸಿಜನ್‌ ಕೊಡಲಿ: ಸಿದ್ದರಾಮಯ್ಯ ...

ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ ರು.10,000 ಗಳನ್ನು ನೀಡಬೇಕು. ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜನ್ನು ನೀಡಬೇಕು. 

ಉದ್ಯೋಗ ಸೃಷ್ಟಿ : ನಗರಗಳಿಂದ ಹಳ್ಳಿಗಳಿಗೆ ದುಡಿಯುವ ಜನ ವಾಪಸಾಗಿರುವ ಹಿನ್ನೆಲೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕನಿಷ್ಟ 200 ಮಾನವ ದಿನಗಳ ಉದ್ಯೋಗ ನೀಡುವುದು ಅಗತ್ಯವಿದೆ. ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿಸಿ. ನರೇಗಾದಡಿ ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆ ಮಾಡಿ ಎಂದು ತಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಲು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona