ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ ಮಾಡೋದ್ರಲ್ಲಿ ಏನರ್ಥ ಇದೆ? ರಾಮನಾಥ್ ರೈ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ. ದ್ವೇಷ ಬಿತ್ತುವ ಕಾರ್ಯಕ್ರಮ ಎಂದು ಆರೋಪಿಸಿದರು. ಬಾಂಗ್ಲಾದೇಶದಲ್ಲಿನ ದೌರ್ಜನ್ಯವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಬೇಕೆಂದು ಹೇಳಿದರು.
ಮಂಗಳೂರು (ಡಿ.9): ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವೆಲ್ಲ ಖಂಡಿಸುತ್ತೇವೆ. ಆದ್ರೆ ಇದೇ ನೆಪದಲ್ಲಿ ಮಂಗಳೂರಿನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವಿಲ್ಲ ಎಂದು ಮಾಜಿ ಸಚಿವ,ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಕಿಡಿಕಾರಿದರು.
ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ರಸ್ತೆ ತಡೆ ಮಾಡಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಇಂದು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಹೆಸರಲ್ಲಿ ದ್ವೇಷ ಬಿತ್ತುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆ ಮಾಡೋದು ಸರ್ಕಾರ ನಡೆಸುವವರ ಜವಾಬ್ದಾರಿ ಹೌದು. ಬಾಂಗ್ಲಾದೇಶದ ತಪ್ಪನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಳುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಾಯಕರು ಒತ್ತಡ ಹಾಕಬೇಕು. ಬಾಂಗ್ಲಾದೇಶ ದೂತವಾಸದ ಎದುರು ಪ್ರತಿಭಟನೆ ಮಾಡಬೇಕು. ಆದ್ರೆ ಅದರಲ್ಲೂ ರಾಜಕೀಯ ಲಾಭ ಪಡೆಯುವ ಪ್ರಯತ್ನ ಆಗುತ್ತಿದೆ ಎಂದು ಆರೋಪಿಸಿದರು.
ದೇಶದ ಆಡಳಿತ ನಡೆಸುವವರು ರಾಜಧರ್ಮ ಪಾಲನೆ ಮಾಡಬೇಕು. ಮಂಗಳೂರಿನಂಥ ಸೂಕ್ಷ್ಮ ಪ್ರದೇಶದ ರಸ್ತೆಯಲ್ಲಿ ಪ್ರತಿಭಟನೆ ನಡೆಸೋದು ಸರಿಯಲ್ಲ. ಇದು ಸಿದ್ದರಾಮಯ್ಯ, ಕರ್ನಾಟಕ ಸರ್ಕಾರ, ಮಂಗಳೂರು ಜಿಲ್ಲಾಧಿಕಾರಿ ಮಾಡಬೇಕಾದ ಕೆಲಸವ? ಕೆಸರು ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ಯಾವ ದೇಶದಲ್ಲಾದರೂ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾದ್ರೆ ಅದನ್ನ ನಾನೂ ಖಂಡಿಸುತ್ತೇನೆ. ಬಾಂಗ್ಲಾದೇಶದ ದೌರ್ಜನ್ಯವನ್ನೂ ನಾನು ಖಂಡಾತುಂಡವಾಗಿ ವಿರೋಧಿಸುತ್ತೇನೆ ಎಂದರು