ಒಂದು ಡೋಸ್‌ಗೆ 1200 : ದುಡ್ಡಿಲ್ಲದವರಿಗೆ ಇಲ್ಲವೇ ಲಸಿಕೆ..?
- ಕೊರೋನಾ ವ್ಯಾಕ್ಸಿನ್ ಒಂದು ಡೋಸ್‌ಗೆ 1200 ರು.
- ದುಡ್ಡಿಲ್ಲದವರಿಗೆ ವ್ಯಾಕ್ಸಿನ್ ಇಲ್ಲವೇ ಎಂದು ಕೈ ನಾಯಕ ಕೃಷ್ಣ ಭೈರೇಗೌಡ ಪ್ರಶ್ನೆ
- ಹೊಟ್ಟೆ ಹಸಿವಿನಿಂದ ನರಳುತ್ತಿರುವಾಗ ದುಡ್ಡು ಕೊಟ್ಟು ವ್ಯಾಕ್ಸಿನ್ ಪಡೆಯಲಾಗುತ್ತಾ?
ಬೆಂಗಳೂರು (ಜೂ.04): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆತಂಕ ಸೃಷ್ಟಿಸಿದ್ದು ಇದಕ್ಕೆ ಒಂದೇ ಪರಿಹಾರ ಆಗಿರುವ ವ್ಯಾಕ್ಸಿನ್ ದುಡ್ಡು ಇಲ್ಲದವರಿಗೆ ಇಲ್ಲವೇ ಎಂದು ಕಾಂಗ್ರೆಸ್ ಮುಖಂಡ ಕೃಷ್ಣ ಭೈರೇಗೌಡ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಕೈ ನಾಯಕ ಕೃಷ್ಣ ಭೈರೇಗೌಡ ದೇಶದಲ್ಲಿ ಇನ್ನೂ ಸಂವಿಧಾನ ಜೀವಂತ ಇದೆಯಾ.? ಕೊರೋನಾ ಸಾವು ನೋವು ಅನುಭವಿಸ್ತಾ ಇರುವಾಗ ಪ್ರಾಣ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗ ಲಸಿಕೆ ಮಾತ್ರ. ವ್ಯಾಕ್ಸಿನ್ ತೆಗೆದುಕೊಂಡು ನಮ್ಮ ಪ್ರಾಣ ಉಳಿಸಿಕೊಳ್ಳುವುದು ನಮ್ಮ ಹಕ್ಕು ಎಂದರು.
ಲಸಿಕೆ ಪಡೆಯಲು ಆ್ಯಪ್ ರಿಜಿಸ್ಟ್ರೇಶನ್ ಕಡ್ಡಾಯ ಯಾಕೆ? ಕೇಂದ್ರಕ್ಕೆ ಸುಪ್ರೀಂ ತರಾಟೆ!
ದುಡ್ಡು ಇದ್ದವರಿಗೆ ಮಾತ್ರ ವ್ಯಾಕ್ಸಿನ್ ಸಿಗುತ್ತಿದೆ. ದುಡ್ಡು ಇಲ್ಲದವರಿಗೆ ವ್ಯಾಕ್ಸಿನ್ ಇಲ್ಲ ಎಂದರೆ ಏನರ್ಥ..? ಒಂದು ಡೋಸ್ ಗೆ 1200 ರು. ಒಂದು ಫ್ಯಾಮಿಲಿಗೆ ಕನಿಷ್ಡ 19,600 ರು. ದುಡ್ಡು ಬೇಕು. ಸೊಪ್ಪು ಮಾರುವವರು, ಕುಂಬಾರರು ಕ್ಷೌರ ಮಾಡುವವರು ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ದುಡ್ಡು ಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಲಾಗತ್ತಾ? ಎಂದು ಪ್ರಶ್ನೆ ಮಾಡಿದರು.
ಬಡವರ ಮಾರಣ ಹೋಮ ಆಗೋದನ್ನು ಸರ್ಕಾರ ಕಾಯ್ತಿದೆಯಾ? ದುಡ್ಡಿದ್ದವರು ದೊಡ್ಡಪ್ಪ, ದುಡ್ಡಿಲ್ಲದವರ ಆತ್ಮಾಹುತಿ ಆಗಬೇಕಾ? ಭ್ರಷ್ಡಾಚಾರದಲ್ಲಿ ಮುಳುಗಿಹೋದ ಸರ್ಕಾರದಿಂದ ಬಡವರು ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಬೇಕಾಗಿದೆ. ಸಮಾಜದಲ್ಲಿ ಮಾನವೀಯತೆ ಎನ್ನುವುದು ಉಳಿದಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೊಂಚ ಇಳಿಕೆಯಾಗಿದ್ದ ಕೋವಿಡ್ ಪ್ರಕರಣ ಮತ್ತೆ ಏರುತ್ತಿದ್ದು ರಾಜ್ಯದಲ್ಲಿ ಆತಂಕ ಸೃಷ್ಟಿಮಾಡಿದೆ. ಇದೇ ವೇಳೆ ವ್ಯಾಕ್ಸಿನೇಷನ್ ಪ್ರಕ್ರಿಯೆಗೆ ಸರ್ಕಾರ ಆದ್ಯತೆ ನೀಡುತ್ತಿಲ್ಲವೆಂದು ಕೈ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.