Asianet Suvarna News Asianet Suvarna News

ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಇಂದು ಬೆಂಗಳೂರಿಗೆ ; 25 ನಿಗಮಾಧ್ಯಕ್ಷರು ಫೈನಲ್‌?

ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧ ಮೊದಲ ಹಂತದ ಪಟ್ಟಿ ಬಹುತೇಕ ಆಖೈರುಗೊಂಡಿದ್ದು, ಈ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.

Congress in-charge Randeep singh Surjewala visit Bangalore today 25 presidents final rav
Author
First Published Nov 28, 2023, 7:01 AM IST

ಬೆಂಗಳೂರು (ನ.28): ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧ ಮೊದಲ ಹಂತದ ಪಟ್ಟಿ ಬಹುತೇಕ ಆಖೈರುಗೊಂಡಿದ್ದು, ಈ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.

ಸಂಭಾವ್ಯರ ಪಟ್ಟಿಯಲ್ಲಿರುವ ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಗ್ರಹಿಸಿದ್ದು, ಈ ಅಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸುರ್ಜೇವಾಲಾ ಅವರು ಅಂತಿಮ ಸಭೆ ನಡೆಸುವ ಸಾಧ್ಯತೆಯಿದೆ. ಬಳಿಕವಷ್ಟೇ ನೇಮಕಾತಿ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

6 ತಿಂಗಳಿಂದ ಸರ್ಕಾರ ಮಲಗಿತ್ತು ಎಂಬ ಆರೋಪ; ವಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧ ಸಿಎಂ ಗರಂ!

ಇನ್ನು ಮೊದಲ ಹಂತದ ಪಟ್ಟಿಯಲ್ಲಿರುವ 25 ಮಂದಿಯೂ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ. ಇವರ ಜತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 15 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಅಂತಿಮಗೊಳಿಸಲು ಇದೇ ವೇಳೆ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.

25 ಮಂದಿ ಸಂಭಾವ್ಯರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದರೆ ಈ ಪೈಕಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ನೇಮಕವನ್ನು ಒಪ್ಪದೆ ಇರಬಹುದು. ಪಟ್ಟಿ ಬಿಡುಗಡೆ ಬಳಿಕ ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ನೇಮಕವನ್ನು ಅಲ್ಲಗಳೆದರೆ ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಇವರೆಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಅದನ್ನು ಮುಂದಿಟ್ಟುಕೊಂಡು ಮಂಗಳವಾರದ ಸಭೆ ನಡೆಯಲಿದೆ. ಹೀಗಾಗಿ ಅಂತಿಮ ಹಂತದಲ್ಲಿ ಕೆಲ ಬದಲಾವಣೆಗಳೂ ಆಗಬಹುದು ಎಂದು ಹೇಳಲಾಗಿದೆ. 

ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; ಊಟದ ಸಮಯದಲ್ಲೂ ಅಹವಾಲು ಆಲಿಸಿದ ಸಿಎಂ!

ಇದೆಲ್ಲಾ ಮಾತುಕತೆ ಬಳಿಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ ಒಪ್ಪಿಗೆಗೆ ಕಳುಹಿಸಲಿದ್ದಾರೆ. ನಂತರವಷ್ಟೇ ನೇಮಕಾತಿ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios