ಸಂವಿಧಾನಕ್ಕೆ ಅತೀ ಹೆಚ್ಚು ಅಪಮಾನ ಮಾಡಿದ್ದೇ ಕಾಂಗ್ರೆಸ್. ಆದರೆ, ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಹುಬ್ಬಳ್ಳಿ (ಮೇ.13): ಸಂವಿಧಾನಕ್ಕೆ ಅತೀ ಹೆಚ್ಚು ಅಪಮಾನ ಮಾಡಿದ್ದೇ ಕಾಂಗ್ರೆಸ್. ಆದರೆ, ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಎಬಿವಿಪಿ ಸಂಘಟನೆ ವತಿಯಿಂದ ಇಲ್ಲಿನ ಕೆಎಲ್ಇ ಟೆಕ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸಂವಿಧಾನ ಬದಲಾಯಿಸಿದ್ದು ಯಾರು? ಬಲಪಡಿಸಿದ್ದು ಯಾರು? ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರೇ ಇವತ್ತು ಸಂವಿಧಾನ ರಕ್ಷಕರು ನಾವೇ ಅನ್ನೋ ರೀತಿಯಲ್ಲಿ ಪೋಸ್ ಕೊಡುತ್ತಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಅತಿಹೆಚ್ಚು ತಿದ್ದುಪಡಿ ಮಾಡಿದವರೇ ಕಾಂಗ್ರೆಸ್ಸಿಗರು. ಸಾಮಾಜಿಕ, ಆರ್ಥಿಕ, ಗಡಿ, ಭದ್ರತೆ ಬಗ್ಗೆ ತಿದ್ದುಪಡಿ ಮಾಡಲಿಲ್ಲ. ನೆಹರು ಪಾಲಿಸಿ ಟೀಕೆ ಮಾಡಿದ್ದಕ್ಕೆ ತಿದ್ದುಪಡಿ ಮಾಡಿದರು ಎಂದರು.

ಖುರ್ಚಿ ಉಳಿಸಿಕೊಳ್ಳಲು ತಿದ್ದುಪಡಿ:
ಇಂದಿರಾ ಗಾಂಧಿ ಅವರ ಖುರ್ಚಿ ಉ‍‍ಳಿಸಿಕೊಳ್ಳಲು ಸಂವಿಧಾನ ಬದಲಾವಣೆ ಮಾಡಲಾಯಿತು. 1975ರಲ್ಲಿ ಸಂವಿಧಾನದ ಮೇಲೆ ಆದಂತ ದೊಡ್ಡ ಆಕ್ರಮಣ ಅದು. ಅಲಹಾಬಾದ್‌ ಹೈಕೋರ್ಟ್‌ ಇಂದಿರಾ ಗಾಂಧಿ ಆಯ್ಕೆ ಅನುರ್ಜಿತಗೊಳಿಸಿದ ನಂತರ 38, 39, 42ನೇ ವಿಧಿಗಳಿಗೆ ಬದಲಾವಣೆ ಮಾಡಲಾಯಿತು. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪರಾಷ್ಟ್ರಪತಿ ಚುನಾವಣೆಯನ್ನು ಪ್ರಶ್ನಿಸುವಂತಿಲ್ಲ ಎಂದು ಬದಲಾವಣೆ ಮಾಡಲಾಯಿತು ಎಂದು ಹೇಳಿದರು.

ಇದನ್ನೂ ಓದಿ: ಅಂಬೇಡ್ಕರ್ ಸೋಲಿಸಿದ್ದು ವೀರ್ ಸಾವರ್ಕರ್; ಬಾಬಾ ಸಾಹೇಬರ ಪತ್ರ ತೋರಿಸಿದ ಖರ್ಗೆ!

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ವೀರ ಸಾವರ್ಕರ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಜ್ಯೂನಿಯರ್ ಖರ್ಗೆ ಪತ್ರ ಬರೆದಿದ್ದಾರೆ. ಆದರೆ, ಅಂಬೇಡ್ಕರ್ ಸೋಲಿಸಲು ನೆಹರು ಎರಡು ಬಾರಿ ಪ್ರಚಾರಕ್ಕೆ ಹೋದರು. ಅವರನ್ನು ಸೋಲಿಸಿದಕ್ಕೆ ಸಂಭ್ರಮಿಸಿ ಸಹ ಪತ್ರ ಬರೆದು, ಅದನ್ನು ಸಿಗಲಾರದಂತೆ ಮಾಡಿದವರು ಕಾಂಗ್ರೆಸ್‌ನವರು. ಹಾಗಿದ್ದರೆ ಕಾರಜೋಳಕರ್ ಅವರಿಗೆ ಪ್ರಶಸ್ತಿ ಯಾಕೆ ಕೊಟ್ರಿ? ಅಂಬೇಡ್ಕರ್ ಅವರನ್ನು ಸೋಲಿಸಿದ ಏಕೈಕ ಕಾರಣಕ್ಕೆ ಪದ್ಮಭೂಷಣ ಕೊಟ್ಟರು. 1987ರಲ್ಲಿ ಬಿಜೆಪಿ ಬೆಂಬಲದ ಹಿನ್ನೆಲೆ ಅವರಿಗೆ ಭಾರತ ರತ್ನ ಕೊಟ್ಟರು. ಅದೂ ಕೂಡ ರಾಜೀವ ಗಾಂಧಿ ಅವರಿಗೆ ಕೊಟ್ಟ ನಂತರ. ಹೀಗಾಗಿ, ಅಂಬೇಡ್ಕರ್ ಅವರಿಗೆ ಮತ್ತು ಅವರು ಬರೆದ ಸಂವಿಧಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅಪಚಾರ ಆಗಿದೆ. ನೆಹರು ಮೀಸಲಾತಿ ವಿರೋಧ ಮಾಡಿ ಎಲ್ಲ ರಾಜ್ಯಕ್ಕೆ ಪತ್ರ ಬರೆದಿದ್ದರು. ರಾಜೀವ ಗಾಂಧೀ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದರು. ಮೀಸಲಾತಿಯನ್ನು ಮುಟ್ಟಲು ಸಹ ನಾವು ಬಿಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರ ಸೇವಕ ಎಂದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ!

ಸತ್ಯವನ್ನು ಸದಾಕಾಲ ಬಚ್ಚಿಟ್ಟು ನಮ್ಮ ದೇಶದ ಚರಿತ್ರೆಯನ್ನು ವಿಕೃತಿಯಾಗಿ ತೋರಿಸುವ ಪ್ರಯತ್ನ ನಡೆಯಿತು. ಹೀಗಾಗಿ, ಅದರ ಅರಿವು ಉಂಟು ಮಾಡಲು ಕಾರ್ಯಕ್ರಮ ನಡಿದಿವೆ. ನಮ್ಮ ಅರಿವಿಗೆ ಹಲವು ವಿಷಯಗಳು ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿವೆ ಎಂದರು.

ಭಯೋತ್ಪಾದಕರೆಲ್ಲ ಖಲಾಸ್‌: ಭಾರತಕ್ಕೆ ಬೇಕಾದ ಉಗ್ರರು ಬಹುತೇಕ ಖಲಾಸ್‌ ಆಗಿದ್ದಾರೆ. ಇನ್ನು ಮುಂದೆ ಪಾಕಿಸ್ತಾನ ಕೆಮ್ಮಿದರೆ ಭಾರತದ ಸೈನ್ಯ ಒಳಹೋಗಿ ಏನು ಮಾಡಬೇಕು, ಅದನ್ನು ಮಾಡುತ್ತದೆ ಎಂದರು.