ಗೃಹಲಕ್ಷ್ಮಿ ಯೋಜನೆ ಗೊಂದಲದ ಗೂಡಾಗಿದೆ. ಪ್ರತಿ ದಿನ ಒಂದೊಂದು ಷರತ್ತು ವಿಧಿಸಲಾಗುತ್ತಿದೆ. ಇದೀಗ ಹೊಸ ಕಂಡೀಷನ್ ಅಪ್ಲೈ ಮಾಡಲಾಗಿದೆ. ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ, ತಾಯಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2,000 ರೂಪಾಯಿ ಪಡೆಯಲು ಅರ್ಹರಲ್ಲ ಎಂದು ಷರತ್ತು ವಿಧಿಸಿದೆ. 

ಬೆಂಗಳೂರು(ಜೂ.08): ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ದಿನಕ್ಕೊಂದು ಷರತ್ತು ವಿಧಿಸಲಾಗುತ್ತಿದೆ. ಈಗಾಗಲೇ ಹಲವು ಷರತ್ತುಗಳೊಂದಿಗೆ ಯೋಜನೆ ಜಾರಿಗೆ ಸರ್ಕಾರ ತಯಾರಿ ನಡೆಸಿತ್ತು. ಇದರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿರುವ ಸರ್ಕಾರ, ಹೊಸ ಷರತ್ತು ಸೇರಿಸಿದೆ. ಮಕ್ಕಳು ತೆರಿಗೆ ಪಾವತಿಸಿದರೆ ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ಅವಕಾಶವಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಪತಿ ಅಥವಾ ಪತ್ನಿ ತೆರಿಗೆ ಪಾವತಿಸಿದರೆ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಇದೀಗ ಮಕ್ಕಳು ತೆರಿಗೆ ಪಾವತಿಸಿದರೆ ಕುಟುಂಬಕ್ಕೆ ಗೃಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಸರ್ಕಾರಿ ಉದ್ಯೋಗದಲ್ಲಿದ್ದ ಕುಟುಂಬಕ್ಕೂ ಗೃಹಲಕ್ಷ್ಮಿ ಯೋಜನೆ ಲಾಭ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸರ್ಕಾರಿ ನೌಕರರು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಹೊಸ ಕಂಡೀಷನ್ ಪ್ರಕಾರ, ಸರ್ಕಾರಿ ನೌಕರರಿಗೂ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ: ಅರ್ಜಿಯಲ್ಲಿ ಏನಿದೆ ? ಕೊನೆಯ ದಿನಾಂಕ ಯಾವಾಗ ?

ಸಿಎಂ ಸಿದ್ದರಾಮಯ್ಯ ಜೊತೆಗಿನ ಮಹತ್ವದ ಸಭೆ ಬಲಿಕ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ಸರಳ ರೀತಿಯಲ್ಲಿ ಯೋಜನೆ ತಲುಪಿಸಲು ಚರ್ಚಿಸಲಾಗಿದೆ. ಯೋಜನೆ ಜಾರಿಗೆ ಯಾವುದೇ ಗೊಂದಲವಿಲ್ಲ.ಅರ್ಜಿಯಲ್ಲಿ ನಮೂದಿಸಿರುವ ಕಾಲಂ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಇದೇ ವೇಳೆ ವೋಟರ್ ಐಡಿ ಸಂಖ್ಯೆ,ಪಾಸ್‌ಬುಕ್ ಸಂಖ್ಯೆ ಬೇಡ ಎಂದು ಸಿಎಂ ಹೇಳಿದ್ದಾರೆ. ಅರ್ಜಿಯನ್ನು ಆನ್‌ಲೈನ್ ಮೂಲಕ ಅಥವಾ ನಾಡಕಚೇರಿಯಲ್ಲಿ ಸಲ್ಲಿಸಬಹುದು ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

ಮೊದಲು ಹೊರಡಿಸಿದ ಆದೇಶದಲ್ಲಿ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ಮರುಪಾವತಿ ಪಡೆಯುವವರು ಈ ಯೋಜನೆಗೆ ಅರ್ಹರಲ್ಲ. ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಹುತೇಕ ನೌಕರರು, ಅಧಿಕಾರಿಗಳು, ಆದಾಯ ತೆರಿಗೆ ಪಾವತಿಗೆ ವಿನಾಯಿತಿ ಇರುವ ವೇತನಕ್ಕಿಂತ ಹೆಚ್ಚು ಸಂಬಳ ಪಡೆಯುವ ಖಾಸಗಿ ನೌಕರರು, ಜಿಎಸ್‌ಟಿ ಮರುಪಾವತಿ ಪಡೆಯುವ ವ್ಯಾಪಾರಸ್ಥರು, ಉದ್ದಿಮೆದಾರರು ಹಾಗೂ ಇತರೆ ಶ್ರೀಮಂತರು ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಿತ್ತು. ಇದೀಗ ಇದೇ ಷರತ್ತಿಗೆ ಮತ್ತೊಂದು ಸೇರಿಸಲಾಗಿದೆ.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸಲು ಮದ್ಯಕ್ಕೆ ತೆರಿಗೆ?

ಮಕ್ಕಳು ತೆರಿಗೆ ಪಾವತಿಸಿದರೆ, ಅಂತಹ ಕುಟುಂಬಕ್ಕೆ ಅಥವಾ ತಾಯಂದಿರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದೀಗ ಕಾಂಗ್ರೆಸ್ ಗ್ಯಾರೆಂಟಿ ಷರತ್ತುಗಳಿಂದಲೇ ತುಂಬಿಕೊಂಡಿದೆ. ಚುನಾವಣೆ ಗೆಲ್ಲಲು ಮಹದೇವಪ್ಪ ನಿಂಗೂ ಫ್ರಿ, ನಂಗೂ ಫ್ರೀ ಎಂದಿದ್ದ ನಾಯಕರು ಇದೀಗ ಷರತ್ತಿನ ಮೇಲೆ ಷರತ್ತು ವಿಧಿಸುತ್ತಿದ್ದಾರೆ. 

ಅಲ್ಲದೆ, ಅಂತ್ಯೋದಯ, ಬಿಪಿಎಲ್‌, ಎಪಿಎಲ್‌ ಕಾರ್ಡುಗಳಲ್ಲಿ ಹೆಸರು ನಮೂದಾಗಿರುವ ಮನೆಯ ಯಜಮಾನಿಯು 2000 ರು. ಸಹಾಯಧನ ನೀಡುವ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಯಾಗಬಹುದು. ಇಂತಹ ಫಲಾನುಭವಿಗಳು ಸುಳ್ಳು ಮಾಹಿತಿ ನೀಡಿ ಯೋಜನೆಯ ಪ್ರಯೋಜನ ಪಡೆದರೆ ಅವರಿಂದ ಭವಿಷ್ಯದಲ್ಲಿ ಮಾಸಾಶನದ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.