ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ನೇಮಕ ವಿವಾದಕ್ಕೆ ಕಾರಣವಾಗಿದೆ. ಕನ್ನಡ ನಟಿಯರಿಗೆ ಅವಕಾಶ ನೀಡದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಸರ್ಕಾರದ ಈ ನಡೆಯನ್ನು ಖಂಡಿಸಿವೆ.
ಬೆಂಗಳೂರು (ಮೇ.23) ಕಾಂಗ್ರೆಸ್ ಸರ್ಕಾರದ 'ನಮ್ಮ ನೀರು, ನಮ್ಮ ಹಕ್ಕು' ಹೋರಾಟಕ್ಕೆ ಕನ್ನಡ ಚಿತ್ರರಂಗದಿಂದ ಬೆಂಬಲ ಸಿಗದಿರುವ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ಚಿತ್ರರಂಗದ ಕಲಾವಿದರನ್ನು ಟೀಕಿಸಿ, 'ನಟ್ಟು-ಬೋಲ್ಟು ಟೈಟು ಮಾಡುತ್ತೇವೆ' ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಅಂದಿನ ಬಹಿರಂಗ ಎಚ್ಚರಿಕೆ ಇದೀಗ ಮತ್ತೆ ವೈರಲ್ ಆಗುತ್ತಿದೆ.
ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಅನ್ಯ ರಾಜ್ಯದ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಲಾಗಿದ್ದು, ಇದಕ್ಕಾಗಿ 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ಖರ್ಚು ಮಾಡಲಾಗುತ್ತಿದೆ. 1916ರಲ್ಲಿ ಮೈಸೂರು ಅರಸರಿಂದ ಸ್ಥಾಪಿತವಾದ, ವಿಶ್ವದರ್ಜೆಯ ಖ್ಯಾತಿಯ ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್‌ಗೆ ಕನ್ನಡದ ನಟಿಯರಿಲ್ಲವೇ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮೂಡಿದೆ.
ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ; ಕನ್ನಡಿಗರ ವಿರೋಧಕ್ಕೆ ಸಚಿವ ಪಾಟೀಲ್ ಸ್ಪಷ್ಟನೆ!
ಈ ನೇಮಕಾತಿಯ ವಿರುದ್ಧ ಜನತಾ ದಳ (ಸೆಕ್ಯುಲರ್) ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದೆ. 'ಕನ್ನಡಿಗರ ಹಿರಿಮೆಯ ಸ್ಯಾಂಡಲ್ ಸೋಪಿಗೆ ಕನ್ನಡದ ಕಲಾವಿದರನ್ನೇ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಬೇಕು. ಅನ್ಯ ರಾಜ್ಯದ ನಟಿಯ ಆಯ್ಕೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದೆ. ಸರ್ಕಾರ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು' ಎಂದು ಜೆಡಿಎಸ್ ಒತ್ತಾಯಿಸಿದೆ.
ಕನ್ನಡಪರ ಸಂಘಟನೆಗಳು ಮತ್ತು ಜನಸಾಮಾನ್ಯರಿಂದಲೂ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರತಿಭಾವಂತ ನಟಿಯರಿದ್ದಾರೆ. ಅವರಿಗೆ ಈ ಅವಕಾಶ ಏಕೆ ನೀಡಲಿಲ್ಲ? ಕನ್ನಡಿಗರ ತೆರಿಗೆಯ ಹಣವನ್ನು ಕನ್ನಡಿಗರಿಗೆ ಬಳಸಲು ಸರ್ಕಾರಕ್ಕೆ ಆಸಕ್ತಿಯಿಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದು 'ಈ ನಿರ್ಧಾರವು ಕಂಪನಿಯ ವಾಣಿಜ್ಯಿಕ ಉದ್ದೇಶಕ್ಕೆ ತಕ್ಕಂತೆ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಆದರೆ ಈ ಸ್ಪಷ್ಟನೆಗೂ ಕನ್ನಡಿಗರ ಆಕ್ರೋಶ ಕಡಿಮೆಯಾಗಿಲ್ಲ.
ಕಾಂಗ್ರೆಸ್ ಸರ್ಕಾರದ ಈ ನಡೆ ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡ ಚಿತ್ರರಂಗದ ಕಲಾವಿದರಿಗೆ ಸಿಗಬೇಕಿದ್ದ ಅವಕಾಶವನ್ನು ಕಿತ್ತುಕೊಂಡಂತಾಗಿದೆ. ಸರ್ಕಾರದ ಈ ನಡೆ ವಿರುದ್ಧ ರಾಜ್ಯದಾದ್ಯಂತ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


