ರಾಷ್ಟ್ರೀಯ ಸ್ವಯಂ ಸೇವಕರ ಸಂಘವನ್ನು (ಆರ್‌ಎಸ್‌ಎಸ್) ನಿಷೇಧಿಸಲು ಮುಂದಾದರೆ ಇಡೀ ದೇಶವೇ ದಂಗೆ ಏಳಲಿದೆ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ಒಂದು ಜಾತಿಗೆ ಸೀಮಿತವಾಗಿಲ್ಲ, ಅದನ್ನು ನೋಡಿ ಕಾಂಗ್ರೆಸ್‌ಗೆ ಭಯ ಶುರುವಾಗಿದೆ ಎಂದು ಟೀಕಿಸಿದರು.

ಮಡಿಕೇರಿ(ಅ.21): ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಿಷೇಧಕ್ಕೆ ಮುಂದಾದರೆ ದೇಶವೇ ದಂಗೆ ಏಳಲಿದೆ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಸಿದ್ದಾರೆ.

ಆರೆಸ್ಸೆಸ್ ಒಂದು ಜಾತಿಗೆ ಸೀಮಿತಾಗಿಲ್ಲ:

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಲು ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು ಇದು ಖಂಡನೀಯ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಎಲ್ಲರೂ ಆರ್‌ಎಸ್‌ಎಸ್‌ನಿಂದ ಬಂದವರು. ಆರ್‌ಎಸ್‌ಎಸ್ ಒಂದು ಜಾತಿಗೆ ಸೀಮಿತವಾಗಿಲ್ಲ. ಇಡೀ ದೇಶದಲ್ಲೇ ವಿಶಾಲವಾಗಿ ಬೆಳೆಯುತ್ತಿದ್ದು, ನಿಷೇಧ ಮಾಡಲು ಮುಂದಾದರೆ ಇಡೀ ದೇಶವೇ ದಂಗೆ ಏಳುತ್ತದೆ ಎಂದು ಹೇಳಿದರು.

ಆರೆಸ್ಸೆಸ್ ಕಂಡರೆ ಕಾಂಗ್ರೆಸ್‌ ಭಯ:

1975, 1992ರಲ್ಲಿ ಆರ್‌ಎಸ್‌ಎಸ್‌ನನ್ನು ನಿಷೇಧ ಮಾಡಿತ್ತು. ಯಾವುದಕ್ಕೂ ಜಗ್ಗದೇ ಮತ್ತೆ ಬಲಿಷ್ಠವಾಗಿ ನಿಂತಿದೆ ಎಂದರು. ಎಲ್ಲಾ ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕರನ್ನು ನೋಡಿ ಕಾಂಗ್ರೆಸ್‌ಗೆ ಭಯ ಆರಂಭವಾಗಿದೆ. ಇಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬಿಡುಗಡೆಯಾಗಬೇಕಿದ್ದ ಅನುದಾನ ಬಿಡುಗಡೆಯಾಗದೇ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್ ಆರ್‌ಎಸ್‌ಎಸ್ ನಿಷೇಧ ಮಾಡುವ ಕುರಿತು ಆಲೋಚನೆ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಗಮನ ಹರಿಸಲಿ ಎಂದು ಹೇಳಿದ್ದಾರೆ.