ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಕಬ್ಬು ಕಟಾವು ಯಂತ್ರದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಯಂತ್ರದ ಜೊತೆಗೆ ಸುಮಾರು 20 ಎಕರೆ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ನಾಲ್ವರು ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

ಬಾಗಲಕೋಟೆ (ಜ.11): ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಕಬ್ಬು ಕಟಾವು ಯಂತ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಕಬ್ಬಿನ ಗದ್ದೆಯೇ ಸುಟ್ಟು ಭಸ್ಮವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಟಾವು ಯಂತ್ರದ ಎಂಜಿನ್‌ನಲ್ಲಿ ಶಾರ್ಟ್ ಸರ್ಕಿಟ್

ತಾಲ್ಲೂಕಿನ ಘಟ್ಟಿಗನೂರು ಗ್ರಾಮದ ಹೊಲದಲ್ಲಿ ಕಬ್ಬು ಕಟಾವು ಮಾಡುವ ಕಾರ್ಯ ಭರದಿಂದ ಸಾಗುತ್ತಿತ್ತು. ಈ ವೇಳೆ ಕಟಾವು ಮಷಿನ್‌ನ ಎಂಜಿನ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕಿಟ್ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಯಂತ್ರಕ್ಕೆ ವ್ಯಾಪಿಸಿದ್ದು, ಯಂತ್ರವು ಸಂಪೂರ್ಣವಾಗಿ ಹೊತ್ತಿ ಉರಿಯತೊಡಗಿದೆ.

20 ಎಕರೆ ಕಬ್ಬು ಬೆಂಕಿಗೆ ಆಹುತಿ!

ಯಂತ್ರಕ್ಕೆ ತಗುಲಿದ ಬೆಂಕಿ ಗಾಳಿಯ ವೇಗಕ್ಕೆ ಸುತ್ತಲಿನ ಕಬ್ಬಿನ ಗದ್ದೆಗಳಿಗೂ ವೇಗವಾಗಿ ಹರಡಿತು. ಘಟನೆಯಲ್ಲಿ ಸುಮಾರು 20 ಎಕರೆಯಷ್ಟು ವಿಸ್ತೀರ್ಣದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ದಹನವಾಗಿದೆ. ಬೆಂಕಿಯ ಕೆನ್ನಾಲಗೆಗೆ ರೈತರು ಆಘಾತಕ್ಕೊಳಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಣ್ಣೆದುರೇ ಬೂದಿಯಾಗಿದೆ.

ನಾಲ್ವರು ರೈತರ ಬದುಕು ಬೀದಿಗೆ

ಈ ಅಗ್ನಿ ಅವಘಡದಿಂದಾಗಿ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ. ಶಿವನಗೌಡ ಪಾಟಿಲ್, ಈರಮ್ಮ ಅಗಸಿಮುಂದಿನ, ವೆಂಕನಗೌಡ ಮತ್ತು ಮಂಜುನಾಥ ವಂದಾಲಿ ಎಂಬುವವರಿಗೆ ಸೇರಿದ ಕಬ್ಬಿನ ತೋಟಗಳು ಬೆಂಕಿಗೆ ಆಹುತಿಯಾಗಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ಈ ದುರಂತ ಸಂಭವಿಸಿರುವುದು ರೈತರನ್ನು ಕಣ್ಣೀರಲ್ಲಿ ಮುಳುಗಿಸಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹುನಗುಂದದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಹರಸಾಹಸ ಪಟ್ಟ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.