ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಈಡೇರಿಸೋದು ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತಿನಂತೆ ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡುವುದೂ ಕೂಡ ಅಷ್ಟೇ ಸತ್ಯ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜೂ.01): ರಾಜ್ಯದ ಜನರಿಗೆ ಕೊಟ್ಟಿರುವ ಭರವಸೆಯಂತೆ ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದೂ ಕೂಡ ಅಷ್ಟೇ ಗ್ಯಾರಂಟಿ. ಈ ಬಗ್ಗೆ ಜೂ.2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಸಂಬಂಧ ವಿಧಾನಸೌಧದಲ್ಲಿ ಬುಧವಾರ ಎಲ್ಲ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತಿನ ಸಭೆಯಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ. ಯಾವ್ಯಾವ ಗ್ಯಾರಂಟಿ ಯೋಜನೆಗಳನ್ನು ಹೇಗೆ ಜಾರಿ ಮಾಡಬಹುದು, ಜಾರಿಗೆ ಯಾವ್ಯಾವ ರೀತಿ ಅವಕಾಶಗಳಿವೆ? ಇದಕ್ಕೆ ಎಷ್ಟು ಹಣಕಾಸು ಸೌಲಭ್ಯ ಬೇಕು ಎಂಬ ಬಗ್ಗೆ ಸಚಿವ ಸಂಪುಟದ ಎಲ್ಲ ಸಹದ್ಯೋಗಿಗಳಿಗೂ ಪ್ರಾತ್ಯಕ್ಷಿಕೆ ಮೂಲಕ ಆರ್ಥಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಚಿವರು ತಮಗೆ ಲಭ್ಯವಾಗಿರುವ ಮಾಹಿತಿಯನ್ನು ಪರಿಶೀಲಿಸಿ ಮತ್ತೊಮ್ಮೆ ಯೋಚನೆ ಮಾಡಿಕೊಂಡು ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕ್ಯಾಬಿನೆಟ್‌ಗೆ ಬರುತ್ತಾರೆ. ಅಲ್ಲಿ ಮತ್ತೊಮ್ಮೆ ಯಾವ್ಯಾವ ಯೋಜನೆಗಳನ್ನು ಹೇಗೆ ಜಾರಿ ಮಾಡುವುದು ಎಂಬ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡುತ್ತೇವೆ. ಆದರೆ, ಕೊಟ್ಟ ಮಾತಿನಂತೆ ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡುವುದೂ ಕೂಡ ಅಷ್ಟೇ ಸತ್ಯ’ ಎಂದರು.
10 ಕೇಜಿ ಉಚಿತ ಅಕ್ಕಿ ನೀಡುವುದು ಖಚಿತ, ಆದರೆ ಯಾವಾಗ ಎಂದು ಸಿಎಂ ನಿರ್ಧರಿಸ್ತಾರೆ: ಸಚಿವ ಕೆಎಚ್ ಮುನಿಯಪ್ಪ
ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಹೊಂದಾಣಿಕೆ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ನೀವು ಅದನ್ನೆಲ್ಲಾ ಯಾಕೆ ಕೇಳುತ್ತೀರಿ? ನೀವು ಹಣ ಕೊಡುತ್ತೀರಾ? ಸರ್ಕಾರ ತಾನೆ ಕೊಡೋದು? ಅದನ್ನೆಲ್ಲಾ ಈಗಲೇ ಹೇಳೋಕಾಗುತ್ತಾ? ಮುಂದೆ ಹೇಳ್ತೀವಿ’ ಎಂದರು.