ನೀಡಿರುವ ಭರವಸೆಯಂತೆ ಪಡಿತರದಲ್ಲಿ 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ಖಚಿತ. ಯಾವಾಗ ನೀಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರು (ಮೇ.31) : ನೀಡಿರುವ ಭರವಸೆಯಂತೆ ಪಡಿತರದಲ್ಲಿ 10 ಕೇಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ಖಚಿತ. ಯಾವಾಗ ನೀಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘10 ಕೆಜಿ ಅಕ್ಕಿ ಉಚಿತ ನೀಡುವ ಸಂಬಂಧ ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಇಲಾಖೆಗೆ ಬರಲಿದೆ. ಇದನ್ನು ಹೇಗೆ ಸರಿದೂಗಿಸಬೇಕು ಎಂಬ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಬಳಿ ಮೊದಲು ಅಕ್ಕಿ ಕೇಳುತ್ತೇವೆ. ಪ್ರಸ್ತುತ ನೀಡುತ್ತಿರುವ ದರದಲ್ಲಿಯೇ ಅಕ್ಕಿ ನೀಡುವಂತೆ ಮನವಿ ಮಾಡಲಾಗುವುದು. ಈ ಸಂಬಂಧ ಅಧಿಕಾರಿಗಳು ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ಟೆಂಡರ್‌ ಕರೆಯುತ್ತೇವೆ’ ಎಂದರು.

ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ: ಸಚಿವ ಮುನಿಯಪ್ಪ

‘ಕೇಂದ್ರ ಸರ್ಕಾರವು ಹೆಚ್ಚುವರಿ ಅಕ್ಕಿ ನೀಡಲಿದೆ ಎಂಬ ವಿಶ್ವಾಸ ಇದೆ. ಪ್ರತಿ ಕೆಜಿಗೆ 34 ರು. ವೆಚ್ಚ ತಗಲುತ್ತದೆ. ಸಾರಿಗೆಗೆ 2.70 ರು. ಬೇಕಾಗುತ್ತದೆ. 2.18 ಮೆಟ್ರಿಕ್‌ ಟನ್‌ ಪ್ರತಿ ತಿಂಗಳು ಅಕ್ಕಿ ಖರೀದಿಸಬೇಕಾಗಿದೆ. 742 ಕೋಟಿ ರು. ಪ್ರತಿ ತಿಂಗಳು ಅಕ್ಕಿ ಖರೀದಿಗೆ ಹಣ ಬೇಕಾಗಿದೆ. ರಾಜ್ಯದಲ್ಲಿ 14,38,796 ಎಪಿಎಲ್‌ ಕಾರ್ಡ್‌ ಹೊಂದಿದವರು ಇದ್ದಾರೆ. ಹೊಸ ಕಾರ್ಡ್‌ಗಳಿಗೆ ಬೇಡಿಕೆ ಬರುತ್ತಿದೆ. ಮಾನದಂಡಗಳನ್ನು ಆಧರಿಸಿ ಹೊಸ ಕಾರ್ಡ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ನಕಲಿ ಕಾರ್ಡ್‌ಗಳ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.