ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆಬಿದ್ದಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅತೃಪ್ತ ಮುಖಂಡರ ಮನವೊಲಿಸಲಾಗಿದ್ದು, ಶಾಮನೂರು ಕುಟುಂಬದ ಮೊಮ್ಮಗ ಹಾಗೂ ಉಮೇಶ್ ಮೇಟಿಗೆ ಟಿಕೆಟ್ ಅಂತಿಮಗೊಂಡಿದೆ.
ಬೆಂಗಳೂರು (ಮಾ.21): ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ 'ಸರ್ಕಸ್' ಸುಖಾಂತ್ಯ ಕಂಡಿದೆ. ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅತೃಪ್ತ ಮುಸ್ಲಿಂ ಮುಖಂಡರನ್ನು ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.
ದಾವಣಗೆರೆ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂದು ಅಲ್ಪಸಂಖ್ಯಾತ ನಾಯಕರು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಜಮೀರ್ ಅಹಮದ್, ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೆ.ಜೆ. ಜಾರ್ಜ್ ಹಾಗೂ ಶಾಸಕರಾದ ಹ್ಯಾರಿಸ್, ರಿಜ್ವಾನ್ ಅರ್ಷದ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಸಲಾಯಿತು. ಹಲವು ಸುತ್ತಿನ ಮಾತುಕತೆಯ ನಂತರ, ಮುಸ್ಲಿಂ ನಾಯಕರು ಒಲ್ಲದ ಮನಸ್ಸಿನಿಂದಲೇ ಹೈಕಮಾಂಡ್ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಅಭ್ಯರ್ಥಿಗಳು ಯಾರು?
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅಂತಿಮವಾಗಿ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಒಲಿದಿದೆ. ಶಾಮನೂರು ಅವರ ಮೊಮ್ಮಗ ಸಮರ್ಥ್ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ನಾಳೆ ಅಧಿಕೃತ ಘೋಷಣೆ - ಸಿಎಂ, ಡಿಸಿಎಂ ಭಾಗಿ
ನಾಳೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ. ವಿಶೇಷವೆಂದರೆ, ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಅಬ್ಬರದಿಂದ ನಡೆಯಲಿದೆ. ಸೋಮವಾರ ಮೊದಲು ದಾವಣಗೆರೆಯಲ್ಲಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ. ದಾವಣಗೆರೆಯ ಕಾರ್ಯಕ್ರಮ ಮುಗಿಸಿ ಸಿಎಂ ಮತ್ತು ಡಿಸಿಎಂ ನೇರವಾಗಿ ಬಾಗಲಕೋಟೆಗೆ ತೆರಳಲಿದ್ದಾರೆ. ಮಧ್ಯಾಹ್ನದ ವೇಳೆಗೆ ಬಾಗಲಕೋಟೆ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅವರು ಸಾಥ್ ನೀಡಲಿದ್ದಾರೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದ ಅಲ್ಪಸಂಖ್ಯಾತ ನಾಯಕರು ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಇನ್ನೊಂದೆಡೆ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಸಚಿವ ಈಶ್ವರ ಖಂಡ್ರೆ ಅವರು ಶಾಮನೂರು ಕುಟುಂಬಕ್ಕೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಈ ಎರಡು ಬಣಗಳ ಪೈಪೋಟಿಯಿಂದಾಗಿ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿತ್ತು.
ಅಲ್ಪಸಂಖ್ಯಾತ ಮುಖಂಡರ ಷರತ್ತು
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಡೆಸಿದ ಸಂಧಾನ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮುಸ್ಲಿಂ ಸಮುದಾಯದ ಸಚಿವರು ಮತ್ತು ಶಾಸಕರು ದಾವಣಗೆರೆ ಟಿಕೆಟ್ ಬಿಟ್ಟುಕೊಡಲು ಒಂದು ಪ್ರಮುಖ ಷರತ್ತು ವಿಧಿಸಿದ್ದಾರೆ. ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಮತ್ತು ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲೇ ಪಕ್ಷದ ವರಿಷ್ಠರು ಈ ಷರತ್ತುಗಳಿಗೆ ಸಮ್ಮತಿಸಿದ ನಂತರವೇ, ದಾವಣಗೆರೆಯನ್ನು ಶಾಮನೂರು ಕುಟುಂಬಕ್ಕೆ ಬಿಟ್ಟುಕೊಡಲು ಅಲ್ಪಸಂಖ್ಯಾತ ಮುಖಂಡರು ಸಮ್ಮತಿಸಿದ್ದಾರೆ ಎನ್ನಲಾಗಿದೆ.


