ಪಿಎಸ್‌ಐ ಅಭ್ಯರ್ಥಿ ಹಾಗೂ ಗೃಹ ಸಚಿವರ ಆರಗ ಜ್ಞಾನೇಂದ್ರ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ತುಣಕನ್ನು ಬಿಡುಗಡೆ ಮಾಡಿದ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ 

ಬೆಂಗಳೂರು(ಡಿ.18):  ಪಿಎಸ್‌ಐ ನೇಮಕಾತಿ ಹಗರಣದ ಸಂಬಂಧ ರಾಜ್ಯ ಕಾಂಗ್ರೆಸ್‌ ಪಕ್ಷವು ಸರ್ಕಾರದ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದು, ಪಿಎಸ್‌ಐ ನೇಮಕಾತಿ ಹಗರಣದ ಸಂಬಂಧ ಪಿಎಸ್‌ಐ ಅಭ್ಯರ್ಥಿ ಹಾಗೂ ಗೃಹ ಸಚಿವರ ಆರಗ ಜ್ಞಾನೇಂದ್ರ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ತುಣಕನ್ನು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ‘545 ಹುದ್ದೆಗಳ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ಮುಗಿಯುವವರೆಗೂ ಯಾವ ನೇಮಕಾತಿಯೂ ಮಾಡಲ್ಲ ಎಂದಿದ್ದ ಸರ್ಕಾರ, ಹೊಸದಾಗಿ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಈ 402 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಅಭ್ಯರ್ಥಿಗಳೇ ಸಿಐಡಿ ಹಾಗೂ ಗೃಹ ಸಚಿವರಿಗೆ ದಾಖಲೆಗಳನ್ನು ಒದಗಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಗೃಹ ಸಚಿವರು ಹಾಗೂ ಅಭ್ಯರ್ಥಿ ಮಾತನಾಡಿರುವ ಆಡಿಯೋದಲ್ಲಿ ‘3 ಶಾಸಕರು, ಒಬ್ಬರು ಸಚಿವರ ಪಾತ್ರವಿದೆ. ಈ ಬಗ್ಗೆ ದಾಖಲೆಗಳನ್ನು ಒದಗಿಸಿದ್ದರೂ ನಿಮ್ಮ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಭ್ಯರ್ಥಿ ದೂರಿದ್ದಾರೆ. ಇದಕ್ಕೆ ಗೃಹ ಸಚಿವರು ಯಾವುದೇ ಉತ್ತರ ನೀಡಿಲ್ಲ. ತನ್ಮೂಲಕ ಸಚಿವರು ಹಾಗೂ ಶಾಸಕರನ್ನು ರಕ್ಷಿಸುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

PSI Recruitment Scam: ಬೇಲ್‌ ಪಡೆದು ಬಂದ ಕಾಂಗ್ರೆಸ್‌ ಮುಖಂಡನಿಗೆ ಭರ್ಜರಿ ಸ್ವಾಗತ!

‘ಸಂಭಾಷಣೆಯಲ್ಲಿ ಆರೋಪಿಸಿರುವ ಆ ಮೂರು ಮಂದಿ ಶಾಸಕರು ಯಾರು? ಈಗಾಗಲೇ ಒಬ್ಬ ಶಾಸಕರ ಆಡಿಯೋ ಬಿಡುಗಡೆಯಾಗಿತ್ತು. ಆ ಧ್ವನಿ ನನ್ನದೇ ಎಂದೂ ಶಾಸಕರು ಹೇಳಿದ್ದರೂ. ಶಾಸಕರ ಭವನದಲ್ಲೇ ಡೀಲ್‌ ಆಗಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಯಾಕೆ ಅವರನ್ನೆಲ್ಲಾ ವಿಚಾರಣೆಗೆ ಒಳಪಡಿಸಿಲ್ಲ?’ ಎಂದು ಪ್ರಶ್ನೆ ಮಾಡಿದರು.

‘40 ಪರ್ಸೆಂಟ್‌ ಸರ್ಕಾರದಲ್ಲಿ ಅತಿ ದೊಡ್ಡ ಹಗರಣ ಎಂದರೆ ಪಿಎಸ್‌ಐ ನೇಮಕಾತಿ ಹಗರಣ. 545 ಹಾಗೂ 402 ಹುದ್ದೆಗಳ ನೇಮಕಾತಿಗೆ ಆದೇಶ ಆಗಿತ್ತು. 545 ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಜಗಜ್ಜಾಹೀರಾಗಿದೆ. ಇದರ ತನಿಖೆ ಮುಗಿಯುವ ಮೊದಲೇ 402 ಹುದ್ದೆಗಳ ನೇಮಕಾತಿ ಮುಂದುವರೆಸಲು ಆದೇಶ ಮಾಡಿದ್ದಾರೆ. ಗೃಹ ಸಚಿವರು ಎಲ್ಲಾ ಉತ್ತರ ಪತ್ರಿಕೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಯಾವೊಬ್ಬ ತಪ್ಪಿತಸ್ಥರನ್ನೂ ಬಿಡಲ್ಲ ಎಂದಿದ್ದರು. ತನಿಖೆ ಏನಾಯಿತು? ಎಫ್‌ಎಸ್‌ಎಲ್‌ ವರದಿ ಬಂದಿದೆಯೇ? ಯಾರಾರ‍ಯರ ಮೇಲೆ ಕ್ರಮ ಕೈಗೊಂಡಿದ್ದಾರೆ?’ ಎಂದು ಪ್ರಶ್ನಿಸಿದರು.

ಸಂಭಾಷಣೆಯಲ್ಲಿ ಏನಿದೆ?

ಪಿಎಸ್‌ಐ ಅಭ್ಯರ್ಥಿ ಹಾಗೂ ಆರಗ ಜ್ಞಾನೇಂದ್ರ ನಡುವೆ ನಡೆದಿದೆ ಎನ್ನಲಾದ ಒಟ್ಟು 8.23 ನಿಮಿಷಗಳ ಸಂಭಾಷಣೆಯನ್ನು ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪಿಎಸ್‌ಐ ಅಭ್ಯರ್ಥಿಯು, ‘545 ಹುದ್ದೆಗಳ ನೇಮಕದ ಅಕ್ರಮ ತನಿಖೆ ಮುಗಿದು ಮರು ಪರೀಕ್ಷೆ ಆಗುವವರೆಗೂ ಸುಮ್ಮನಿರದೆ 402 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದೀರಿ. ಇದರಿಂದ 545 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ 56 ಸಾವಿರ ಮಂದಿಗೆ ಅನ್ಯಾಯವಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

PSI Recruitment Scam: ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ; ಎಡಿಜಿಪಿ ಅಮೃತ್ ಪೌಲ್ ಪುತ್ರಿ ಪತ್ರ

ಜತೆಗೆ ‘545 ಹುದ್ದೆಗಳ ನೇಮಕಾತಿ ವೇಳೆ ನೇಮಕಾತಿ ಆದೇಶ ಪಡೆದವರು ಪಾರ್ಟಿ ಮಾಡುತ್ತಿದ್ದಾರೆ. ಅವರ ಪರವಾಗಿ ಆದೇಶವಾಗಲಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನೇಮಕಾತಿ ಅಕ್ರಮದಲ್ಲಿ ಬಂಧಿಸಿದ್ದ ಆರೋಪಿಗಳನ್ನೆಲ್ಲಾ ಬೇಲ್‌ ನೀಡಿ ಬಿಡುಗಡೆ ಮಾಡುತ್ತಿದ್ದೀರಿ. ಈಗಾಗಲೇ 15 ಮಂದಿಗೆ ಬೇಲ್‌ ಸಿಕ್ಕಿದೆ. ಇನ್ನು ಡಿಜಿಪಿ ಸೇರಿದಂತೆ ಮೂರ್ನಾಲ್ಕು ಹಿರಿಯ ಪೊಲೀಸ್‌ ಅಧಿಕಾರಿಗಳು, ಸಚಿವರು ಹಾಗೂ ಮೂರು ಮಂದಿ ಶಾಸಕರ ಬಗ್ಗೆ ಸಾಕ್ಷ್ಯಗಳನ್ನು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಕಿಡಿ ಕಾರಿದ್ದಾರೆ.

ಇದಕ್ಕೆ ಆಡಿಯೋದಲ್ಲಿ ಪ್ರತಿಕ್ರಿಯೆ ನೀಡಿರುವರು ಎನ್ನಲಾದ ಆರಗ ಜ್ಞಾನೇಂದ್ರ, ‘ಯಾರದ್ದೋ ಖುಷಿಗೆ ಸರ್ಕಾರ ಕೆಲಸ ಮಾಡಲ್ಲ. ಕಾನೂನು ಪ್ರಕಾರವೇ ಸರ್ಕಾರ ಹೋಗುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಅಕ್ರಮಕ್ಕೆ ಸಹಕಾರ ಮಾಡಿದವರಿಗೆ ಕೆಲವರಿಗೆ ಬೇಲ್‌ ಸಿಕ್ಕಿದೆ. ಅದರ ವಿರುದ್ಧ ಮೇಲ್ಮನವಿಗೆ ಹೋಗಲು ಚರ್ಚಿಸುತ್ತೇವೆ. ಡಿಜಿಪಿ, ಕಲಬುರಗಿ ಎಸ್‌ಪಿ ವಿರುದ್ಧ ಸಾಕ್ಷ್ಯಗಳು ಸಮರ್ಪಕವಾಗಿದ್ದರೆ ಅವರ ಮೇಲೂ ಪ್ರಕರಣ ದಾಖಲಾಗುತ್ತಿತ್ತು. ಯಾವ್ಯಾವುದೋ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ’ ಎಂದು ಹೇಳಿರುವುದು ಸಂಭಾಷಣೆಯಲ್ಲಿ ತಿಳಿಯುತ್ತದೆ.