* ಶೇ.50 ಸೀಟು ಭರ್ತಿ ಮಾಡಿ ಬಸ್‌ ಸಂಚಾರಕ್ಕೆ ಸರ್ಕಾರ ಅನುಮತಿ* 13 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇದೆ, ಅಲ್ಲಿ ಏನು ಮಾಡಬೇಕು?* ಶೇ.93ರಷ್ಟು ಕೋವಿಡ್‌ ಮೊದಲ ಡೋಸ್‌ ಲಸಿಕೆ ಪಡೆದ ನೌಕರರು  

ಬೆಂಗಳೂರು(ಜೂ.20): ಅನ್‌ಲಾಕ್‌ 2.0ನಲ್ಲಿ ಬಸ್‌ ಸಂಚಾರಕ್ಕೆ ಅನುಮತಿ ದೊರಕಿರುವುದರಿಂದ ಸೋಮವಾರದಿಂದ ಬಸ್‌ ರಸ್ತೆಗಿಳಿಸಲು ಕೆಎಸ್ಸಾರ್ಟಿಸಿ ಸಕಲ ಸಿದ್ಧತೆ ನಡೆಸಿದೆ. ಆದರೆ, 13 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇನ್ನೂ ಇರುವುದರಿಂದ ಕಾರ್ಯಾಚರಣೆ ನಡೆಸುವುದು ಹೇಗೆ ಎಂಬ ಗೊಂದಲ ಸಂಸ್ಥೆಯನ್ನು ಕಾಡಿದೆ.

ಎರಡನೇ ಹಂತದ ಅನ್‌ಲಾಕ್‌ 16 ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ, ಈ ಜಿಲ್ಲೆಗಳಿಗೆ ಬಸ್‌ ತೆರಳುವಾಗ ಅನ್‌ಲಾಕ್‌ ಅನ್ವಯವಾಗದ ಜಿಲ್ಲೆಗಳನ್ನು ಹಾಯ್ದು ಹೋಗಲೇಬೇಕಾಗುತ್ತದೆ. ಈ ವಿಚಾರವೂ ಸೇರಿದಂತೆ ಅಂತರ್‌ ರಾಜ್ಯ ಬಸ್‌ ಸೇವೆ, ಎ.ಸಿ. ಬಸ್‌ ಸೇವೆ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಇಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ ಕಾರ್ಯಾಚರಣೆಯಲ್ಲಿ ಗೊಂದಲಕ್ಕೆ ಸಿಲುಕಿದೆ.

ಅನ್ ಲಾಕ್ ಸಂಪೂರ್ಣ ಮಾರ್ಗಸೂಚಿ.. ಏನಿದೆ? ಏನಿಲ್ಲ?

ಇದರ ನಡುವೆಯೇ ಬಸ್‌ ಸಂಚಾರಕ್ಕೆ ಸಂಸ್ಥೆ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು ಎಂಟು ಸಾವಿರ ಬಸ್‌ಗಳ ಪೈಕಿ ಸೋಮವಾರದಿಂದ 2500-3000 ಸಾವಿರ ಬಸ್‌ ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸಿದೆ. ಶೇ.50ರಷ್ಟು ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಿರುವುದರಿಂದ ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಇಬ್ಬರು ಕೂರುವ ಆಸನಗಳಲ್ಲಿ ಒಬ್ಬರು ಹಾಗೂ ಮೂವರು ಕೂರುವ ಆಸನದಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಕುಳಿತು ಪ್ರಯಾಣಿಸಬೇಕು. ಪ್ರಯಾಣಿಕರ ದಟ್ಟಣೆ ಮೇರೆಗೆ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿಗಮ ತೀರ್ಮಾನಿಸಿದೆ.

ಈಗಾಗಲೇ ನಿಗಮದಲ್ಲಿ ಶೇ.93ರಷ್ಟು ನೌಕರರು ಕೋವಿಡ್‌ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್‌ ಲಸಿಕೆ ಪಡೆದ ನೌಕರರಿಗೆ ಕರ್ತವ್ಯ ನಿರ್ವಹಿಸಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಇನ್ನು ಈಗಾಗಲೇ ಡಿಪೋಗಳಲ್ಲಿ ಬಸ್‌ಗಳ ಸ್ಚಚ್ಛತೆ, ಸ್ಯಾನಿಟೈಸೇಷನ್‌ ಮಾಡಲಾಗಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಸಂಬಂಧಪಟ್ಟ ಡಿಪೋಗಳಿಗೆ ಕೋರೋನಾ ಸೋಂಕು ಪರೀಕ್ಷೆಯ ನೆಗೆಟೀವ್‌ ವರದಿ ನೀಡುವಂತೆ ಸೂಚಿಸಲಾಗಿದೆ.