ಅರ್ಜಿದಾರರು ಎರಡೂ ಶಿಕ್ಷೆಗಳ ಅವಧಿಯನ್ನು ಏಕ ಕಾಲಕ್ಕೆ ಅನುಭವಿಸಬೇಕು ಎಂದು ಸ್ಪಷ್ಟನೆ ನೀಡಿ ಆದೇಶ ನೀಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ. 

ಬೆಂಗಳೂರು(ಫೆ.28): ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ದರೋಡೆ ಪ್ರಕರಣದಲ್ಲಿ ನಿಗದಿತ ಅವಧಿಯ ಜೈಲು ಶಿಕ್ಷೆ ವಿಧಿಸಿದ್ದರೆ, ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆಯ ಅವಧಿ ಸೇರಿಸಿ ಜೈಲು ಶಿಕ್ಷೆ ಅನುಭವಿಸಬೇಕು, ಒಂದು ಶಿಕ್ಷೆಯ ಅವಧಿ ಮುಗಿದ ನಂತರ ಮತ್ತೊಂದು ಅನುಭವಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ರಾಮಚಂದ್ರ ರೆಡ್ಡಿ ಮತ್ತು ಕೆ.ಆರ್‌.ಸುಕುಮಾರ್‌ ಎಂಬುವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ನಡೆಸುವಾಗ ನೋವು ಉಂಟುಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಎರಡೂ ಶಿಕ್ಷೆಗಳು ಏಕ ಕಾಲದಲ್ಲಿ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೇ ಎಂಬ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಇದರಿಂದ ಅವರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ, ಅರ್ಜಿದಾರರು ಎರಡೂ ಶಿಕ್ಷೆಗಳ ಅವಧಿಯನ್ನು ಏಕ ಕಾಲಕ್ಕೆ ಅನುಭವಿಸಬೇಕು ಎಂದು ಸ್ಪಷ್ಟನೆ ನೀಡಿ ಆದೇಶ ನೀಡಿದೆ. ಈ ಆದೇಶದಿಂದ 22 ವರ್ಷದಿಂದ ಜೈಲಿನಲ್ಲಿರುವ ಈ ಇಬ್ಬರು ಅಪರಾಧಿಗಳಿಗೆ, ಕ್ಷಮದಾನ ಅಥವಾ ಅವಧಿಪೂರ್ವ ಬಿಡುಗಡೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಿದೆ.

ಪತಿ ಮಾರಿದ್ದ ಜಮೀನು ತನ್ನದೆಂದ ವೃದ್ಧೆಗೆ 1 ಲಕ್ಷ ದಂಡ: ಹೈಕೋರ್ಟ್‌

ಪ್ರಕರಣದ ವಿವರ:

ಕೊಲೆ, ಅಪರಾಧಿಕ ಒಳಸಂಚು ಹಾಗೂ ಸಾಕ್ಷ್ಯ ನಾಶ ಆರೋಪದಡಿ ಬಾಗೇಪಲ್ಲಿಯ ರಾಮಚಂದ್ರಾರೆಡ್ಡಿ ಮತ್ತು ಚಿಂತಾಮಣಿಯ ಸುಕುಮಾರ್‌ ವಿರುದ್ಧ 2002ರ ಸೆ.3ರಂದು ಪ್ರಕರಣ ದಾಖಲಾಗಿತ್ತು. 2010ರ ನ.25ರಂದು ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯ, ಈ ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರು. ದಂಡ ವಿಧಿಸಿತ್ತು. ದರೋಡೆಗೆ ಪ್ರಯತ್ನಿಸಿದಾಗ ನೋವು ಉಂಟುಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರು. ದಂಡ ವಿಧಿಸಿತ್ತು.

ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು. ಇದರಿಂದ ಹೈಕೋರ್ಟ್‌ ಮೆಟ್ಟಲೇರಿದ್ದ ಅರ್ಜಿದಾರರು, ಅಧೀನ ನ್ಯಾಯಾಲಯ ತನ್ನ ಆದೇಶದಲ್ಲಿ ಜೀವಾವಧಿ ಶಿಕ್ಷೆ ಮತ್ತು 10 ವರ್ಷ ಶಿಕ್ಷೆಯ ಒಟ್ಟಿಗೆ ಅನುಭವಿಸಬೇಕೆ ಅಥವಾ ಒಂದು ಶಿಕ್ಷಾ ಅವಧಿ ಪೂರೈಸಿದ ನಂತರ ಮತ್ತೊಂದನ್ನು ಅನುಭವಿಸಬೇಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂಧ 2002ರ ಸೆ.22ರಿಂದ ಜೈಲಿನಲ್ಲಿದ್ದು, ಒಟ್ಟು 22 ವರ್ಷ ಶಿಕ್ಷೆ ಪೂರೈಸಿರುವ ತಮಗೆ, ಕ್ಷಮದಾನ ಕೋರಲು ಮತ್ತು ಅವಧಿಪೂರ್ವ ಬಿಡುಗಡೆಗೆ ಕೋರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಿಕ್ಷಾವಧಿ ಪೂರೈಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಎರಡು ಪ್ರತ್ಯೇಕ ಅಪರಾಧಗಳ ಸಂಬಂಧ ಶಿಕ್ಷೆ ವಿಧಿಸಲಾಗಿದೆ. ವಿಧಿಸಿರುವ ಶಿಕ್ಷೆಯ ಪೈಕಿ ಜೀವಾವಧಿ ಶಿಕ್ಷೆಯೇ ಗರಿಷ್ಠ ಪ್ರಮಾಣದ್ದಾಗಿದೆ. ನಂತರ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸುಪ್ರಿಂ ಕೋರ್ಟ್‌ ಮಾರ್ಗಸೂಚಿಗಳ ಪ್ರಕಾರ ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಇತರೆ ಪ್ರಕರಣಗಳಲ್ಲಿ ವಿಧಿಸಲಾದ ಶಿಕ್ಷೆಯು ಜೀವಾವಧಿ ಶಿಕ್ಷೆ ಒಳಗೆ ಬರುತ್ತದೆ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ವಿಧಿಸಲಾದ ಎರಡು ಪ್ರತ್ಯೇಕ ಶಿಕ್ಷೆಗಳು ಸಹ ಏಕ ಕಾಲದಲ್ಲಿಯೇ ಜಾರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.