ದಂಡ ಕಟ್ಟದಿದ್ದರೆ ನಿತ್ಯ 500 ರು. ಹೆಚ್ಚುವರಿ ಪಾವತಿಗೆ ಹೈಕೋರ್ಚ್ ಆದೇಶ, ನ್ಯಾಯಾಂಗ ಪ್ರಕ್ರಿಯೆ ದುರುಪಯೋಗಕ್ಕೆ ಕಿಡಿ.
ವೆಂಕಟೇಶ್ ಕಲಿಪಿ
ಬೆಂಗಳೂರು(ಫೆ.27): ಸಾರ್ವಜನಿಕರೊಬ್ಬರಿಂದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಎಲ್ಲ ಪ್ರಕ್ರಿಯೆ ಮುಗಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಎಐಡಿಬಿ) ಪರಿಹಾರ ನೀಡಿದ ಐದಾರು ವರ್ಷಗಳ ನಂತರ ತಾನೇ ಜಮೀನಿನ ಮಾಲೀಕಳಾಗಿದ್ದು, ಪರಿಹಾರ ನೀಡಲು ಆದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಹೈಕೋರ್ಟ್ ಒಂದು ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ದಂಡ ಮೊತ್ತವನ್ನು 4 ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಪಾವತಿಸಬೇಕು. ಈ ಅವಧಿಯಲ್ಲಿ ದಂಡ ಪಾವತಿಸದಿದ್ದರೆ ವಿಳಂಬ ಮಾಡಿದ ಪ್ರತಿ ದಿನಕ್ಕೆ ತಲಾ 500 ರು. ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ತಾಕೀತು ಮಾಡಿದೆ. ಜತೆಗೆ, ಈ ಆದೇಶವನ್ನು ವೃದ್ಧೆ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಕೆಎಸ್‌ಎಲ್‌ಎಸ್‌ಎ ಮುಕ್ತರಾಗಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು ಉತ್ತರ ತಾಲೂಕಿನ ಬುಡೇನಸಾಬ್ ಪಾಳ್ಯದ ನಿವಾಸಿ ಶಬಿ ರಬಿ (71) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ. ತಾನು ದೇವನಹಳ್ಳಿ ತಾಲೂಕಿನ ಬಂಡಿಕೊಡಿಗೆಹಳ್ಳಿ ಗ್ರಾಮದ ಸರ್ವೇ ನಂಬರ್ 40ರಲ್ಲಿನ 1 ಎಕರೆ 16 ಗುಂಟೆ ಜಮೀನು ಮಾಲೀಕಳಾಗಿದ್ದೇನೆ. ಈ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದ್ದರಿಂದ ನನಗೆ ಪರಿಹಾರ ಪಾವತಿಸಬೇಕು ಎಂದು ಕೋರಿ ಅರ್ಜಿದಾರೆ 2013ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಗಿಫ್ಟ್, ಕ್ಯಾಶ್‌ಬ್ಯಾಕ್ ವೋಚರ್‌ಗೆ ಜಿಎಸ್‌ಟಿ ಇಲ್ಲ: ಹೈಕೋರ್ಟ್
ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಸರ್ಕಾರ ಮತ್ತು ಕೆಐಎಡಿಬಿ, ವಿವಾದಿತ ಜಮೀನಿನ ಮೇಲೆ ಅರ್ಜಿದಾರರಿಗೆ ಯಾವುದೇ ಹಕ್ಕು ಇಲ್ಲ. ಆ ಜಮೀನನ್ನು ಅರ್ಜಿದಾರರ ಪತಿ ಮತ್ತು ಪುತ್ರ 2004ರ ನ.20ರಂದು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಇದಾದ ನಂತರ ಅರ್ಜಿಯನ್ನು ತಿದ್ದುಪಡಿಗೊಳಿಸಿದ್ದ ಅರ್ಜಿದಾರರು, ಈ ಜಮೀನನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಾರಾಟ ಕ್ರಯ ಕಾನೂನು ಬಾಹಿರವಾಗಿದ್ದು, ರದ್ದುಪಡಿಸಬೇಕು. ಹಾಗೆಯೇ, ತನ್ನನ್ನೇ ಜಮೀನಿನ ಮಾಲೀಕರೆಂದು ಘೋಷಿಸಬೇಕು ಹಾಗೂ ತನಗೆ ಪರಿಹಾರ ಪಾವತಿಸಲು ಆದೇಶಿಸಬೇಕು ಎಂದು ಕೋರಿದ್ದರು.
ಅದಕ್ಕೆ ಸರ್ಕಾರ ಹಾಗೂ ಕೆಐಎಡಿಬಿ ಆಕ್ಷೇಪಿಸಿ, ನ್ಯಾಯಾಲಯವು ಜಮೀನು ಮಾರಾಟ ಕ್ರಯವನ್ನು ರಿಟ್ ಅಧಿಕಾರ ವ್ಯಾಪ್ತಿ ಬಳಸಿ ರದ್ದುಪಡಿಸಲಾಗದು. ಅರ್ಜಿದಾರರು ಪ್ರಕರಣದ ವಾಸ್ತವಾಂಶ ಮರೆಮಾಚಿ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ವಂಚನೆ ಮಾಡಲು ಯತ್ನಿಸಿದ್ದು, ದಂಡ ಸಹಿತ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ವಿವಾದಿತ ಜಮೀನನ್ನು ಅರ್ಜಿದಾರರ ಪತಿ ಮತ್ತು ಪುತ್ರ 2004ರ ನ.11ರಂದು ಬೇರೊಬ್ಬರಿಗೆ (ಮಾಜಿ ಸಚಿವರ ಪುತ್ರ) ಮಾರಾಟ ಮಾಡಿದ್ದಾರೆ. ಈ ಜಮೀನು ಸ್ವಾಧೀನ ಸಂಬಂಧ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಜಮೀನು ಮಾಲೀಕರಿಗೆ ಪರಿಹಾರ ಸಹ ಪಾವತಿಸಲಾಗಿದೆ ಎಂದು ತಿಳಿಸಿದೆ.
ಇದಾದ ಹಲವು ವರ್ಷಗಳ ನಂತರ (2013ರಲ್ಲಿ) ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿವಾದಿತ ಜಮೀನು ಮಾಲೀಕ ತಾನಾಗಿದ್ದು, ಪರಿಹಾರ ಪಾವತಿಸಬೇಕೆಂದು ಕೋರಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಗೆ ಸುದೀರ್ಘ ಸಮಯದ ವಿಳಂಬ ಮಾಡಿರುವುದಕ್ಕೆ ಸರಿಯಾದ ವಿವರಣೆ ನೀಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಆಸ್ತಿ ಮಾರಾಟದ ವೇಳೆ ಯಾವೊಂದು ಮಾತು ಆಡಿಲ್ಲ. ಅರ್ಜಿಯಲ್ಲಿ ಈ ಎಲ್ಲ ಮಾಹಿತಿ ಮರೆ ಮಾಚಿದ್ದಾರೆ. ಸತ್ಯಾಂಶ ಮಾಹಿತಿ ಮರೆಮಾಚಿದ ಕೃತ್ಯದಲ್ಲಿ ಅಪರಾಧಿಯಾಗಿದ್ದಾರೆ. ಕಕ್ಷಿದಾರರು ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗ ಪಡೆಸಿಕೊಳ್ಳುವುದನ್ನು ತಡೆಯಬೇಕಿದೆ. ಹಾಗಾಗಿ, ಅರ್ಜಿದಾರರಿಗೆ ದಂಡ ವಿಧಿಸಿ ಅರ್ಜಿ ವಜಾಗೊಳಿಸುವುದು ಸೂಕ್ತವಾಗಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
