ಅಮಿತ್ ಶಾ ಸಂಧಾನ ಮಹಾದಿಂದ ಉಲ್ಲಂಘನೆ, ಮಹಾರಾಷ್ಟ್ರ ನಿರ್ಧಾರ ಅಕ್ಷಮ್ಯ ಅಪರಾಧ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು(ಮಾ.17): ಕರ್ನಾಟಕಕ್ಕೆ ಸೇರಿದ ಗಡಿ ಭಾಗದ ಜನರಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಯೋಜನೆ ನೀಡಲು ನಿರ್ಣಯ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಲು ಮುಂದಾಗಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆ ಕುರಿತ ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಅಕ್ಷಮ್ಯ ಅಪರಾಧ ಎಂದು ಹರಿಹಾಯ್ದರು.
ಮಹಾರಾಷ್ಟ್ರದ ಅನುದಾನ ತಡೆಯಲು ಕ್ರಮ: ಸಿಎಂ ಬೊಮ್ಮಾಯಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಚ್ ಆದೇಶ ಬರುವವರೆಗೆ ಕಾಯಬೇಕು. ಅಲ್ಲಿವರೆಗೆ ಯಾವುದೇ ಪ್ರಚೋದನೆ ನಡೆಯಬಾರದೆಂದು ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಕೂಡಲೇ ಆಜ್ಞೆಯನ್ನು ಹಿಂದೆಗೆದುಕೊಳ್ಳಬೇಕು. ಈ ವಿಚಾರವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.
ಈ ರೀತಿಯ ಯೋಜನೆಗಳನ್ನು ನಾವೂ ಕೂಡ ಪ್ರಕಟಿಸಬಹುದು. ಹಲವಾರು ತಾಲ್ಲೂಕುಗಳು, ಗ್ರಾಮ ಪಂಚಾಯ್ತಿಗಳು ಮಹಾರಾಷ್ಟ್ರದಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ, ಕರ್ನಾಟಕಕ್ಕೆ ಸೇರಬೇಕು ಎಂದು ಈಗಾಗಲೇ ನಿರ್ಣಯ ಮಾಡಿವೆ. ಇಂಥ ಪರಿಸ್ಥಿತಿಯಲ್ಲಿ ಇದ್ದಾಗ ಮಹಾರಾಷ್ಟ್ರದ ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ನಿರ್ಧಾರ ಹಿಂಪಡೆಯಲಿ
ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಚ್ ಆದೇಶ ಬರುವವರೆಗೂ ಕಾಯಬೇಕು. ಅಲ್ಲಿವರೆಗೆ ಯಾವುದೇ ಪ್ರಚೋದನೆ ನಡೆಯಬಾರದೆಂದು ಅಮಿತ್ ಶಾ ಸಮ್ಮುಖ ಒಪ್ಪಲಾಗಿತ್ತು. ಈಗ ಅದರ ಉಲ್ಲಂಘನೆಯಾಗಿದೆ. ಹೀಗಾಗಿ ಈ ವಿಚಾರವನ್ನು ಅಮಿತ್ ಶಾ ಗಮನಕ್ಕೆ ತರಲಾಗುವುದು. ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ. ಕೂಡಲೇ ಆಜ್ಞೆಯನ್ನು ಆ ರಾಜ್ಯ ಹಿಂಪಡೆಯಬೇಕು ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
