ಮಹಾರಾಷ್ಟ್ರದ ಅನುದಾನ ತಡೆಯಲು ಕ್ರಮ: ಸಿಎಂ ಬೊಮ್ಮಾಯಿ
ಅವ್ರು ಹಣ ಬಿಡುಗಡೆ ಮಾಡಿದ್ರೆ ನಾನ್ಯಾಕೆ ರಾಜೀನಾಮೆ ನೀಡಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ತಿರುಗೇಟು.
ಬೆಳಗಾವಿ(ಮಾ.16): ಮಹಾರಾಷ್ಟ್ರದವರು ಕರ್ನಾಟಕದ 865 ಗಡಿ ಗ್ರಾಮಗಳಲ್ಲಿ ಜಾರಿಗೊಳಿಸಲುದ್ದೇಶಿಸಿರುವ ಆರೋಗ್ಯ ವಿಮೆ ಯೋಜನೆ ತಡೆಯಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಹಾರಾಷ್ಟ್ರದವರು ಏನು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ತಡೆಯುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ನಾನ್ಯಾಕೆ ರಾಜೀನಾಮೆ ನೀಡಲಿ:
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡುತ್ತಿರುವ ವಿಚಾರವಾಗಿ ತಮ್ಮ ರಾಜೀನಾಮೆಗೆ ಒತ್ತಾಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದವರು ಅನುದಾನ ಬಿಡುಗಡೆ ಮಾಡಿದರೆ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದ್ದಾರೆ.
75 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ: ವಿಜಯೇಂದ್ರ
‘ನಾವು ಕೂಡ ಕನ್ನಡಿಗರು ಭೇಟಿ ನೀಡುವ ಮಹಾರಾಷ್ಟ್ರದಲ್ಲಿರುವ ಪಂಢರಪುರ, ತುಳಜಾಪುರಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವೆ. ಗಡಿಗ್ರಾಮಗಳಿಗೆ ಅವರೇನು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಅದನ್ನು ತಡೆಯಲು ಏನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಡಿ.ಕೆ.ಶಿವಕುಮಾರ್ ಅವರಿಂದ ನಾನು ಈ ವಿಚಾರದಲ್ಲಿ ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.
ಏನಿದು ವಿವಾದ?
ಬೆಳಗಾವಿ: ಗಡಿ ವಿವಾದ ಮುಂದಿಟ್ಟುಕೊಂಡು ಪದೇ ಪದೆ ಕರ್ನಾಟಕದ ಜತೆಗೆ ಕ್ಯಾತೆ ತೆಗೆಯುತ್ತಾ ಬಂದಿರುವ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ 865 ಹಳ್ಳಿ, ಪಟ್ಟಣಗಳಲ್ಲಿನ ಜನರಿಗೆ ಆರೋಗ್ಯ ವಿಮೆ ನೀಡಲು ಮುಂದಾಗಿದೆ. ಮಹಾತ್ಮಾಪುಲೆ ಜನಾರೋಗ್ಯ ಯೋಜನೆಯಡಿ .54 ಕೋಟಿ ವೆಚ್ಚದಲ್ಲಿ ಕರ್ನಾಟಕದ ಗಡಿಯಲ್ಲಿರುವ ಹಳ್ಳಿ ಜನರಿಗೆ ಇದನ್ನು ಜಾರಿ ಮಾಡುತ್ತಿದೆ. ಇದು ತೀವ್ರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.