ಬೆಂಗಳೂರು(ನ.03): ಪಠ್ಯದಲ್ಲಿ ಟಿಪ್ಪು ಇತಿಹಾಸವನ್ನು ತೆಗೆಯುವ ಕುರಿತು ನ.7ರಂದು ಪಠ್ಯಪುಸ್ತಕ ಸಮಿತಿ ಸಭೆ ಕರೆಯಲಾಗಿದೆ. ವಿಚಿತ್ರವೆಂದರೆ ಈ ಸಮಿತಿ ರಚನೆಯೇ ಆಗಿಲ್ಲ.

ಈ ಕುರಿತು ಕಾರ್ಯಕ್ರಮವೊಂದರಲ್ಲಿ ಸ್ಪಷ್ಟನೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ಕರ್ನಾಟಕ ಪಠ್ಯಪುಸ್ತಕ ಸಂಘದೊಂದಿಗೆ ಚರ್ಚಿಸಿ ಸಮಿತಿ ರಚನೆ ಮಾಡಿದ ಬಳಿಕವೇ ಚರ್ಚಿಸಲಾಗುವುದು. ನ.7ರಂದು ಸಭೆ ಇರುವುದರಿಂದ ಇನ್ನೂ ನಾಲ್ಕು ದಿನಗಳಿವೆ. ಅಷ್ಟರೊಳಗೆ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.

ಟಿಪ್ಪು ಪಠ್ಯ ರದ್ದು: ಸಿಎಂ ಚಿಂತ​ನೆಗೆ ಕಟೀಲು ಸಮ​ರ್ಥ​ನೆ.

ಪ್ರತಿ ಬಾರಿ ಪುಸ್ತಕ ಪರಿಷ್ಕರಣೆ ವೇಳೆ ಸಮಿತಿ ರಚನೆ ಮಾಡಲಾಗುತ್ತಿದೆ. ಸದ್ಯ ಯಾವುದೇ ರೀತಿಯಲ್ಲಿ ಪಠ್ಯವನ್ನು ಪರಿಷ್ಕರಣೆ ಮಾಡುತ್ತಿಲ್ಲ. ಹೀಗಾಗಿ, ಯಾವುದೇ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲ. ಈ ಹಿಂದೆ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲಾಗಿತ್ತು. ಅದಾದ ಬಳಿಕ ಯಾವುದೇ ಸಮಿತಿಗಳಿಲ್ಲ ಎಂದು ತಿಳಿಸಿದ್ದಾರೆ.

‘ಟಿಪ್ಪು ಹಿಂದುಗಳ ಮೇಲೆ ನಡೆಸಿದ ದೌರ್ಜನ್ಯ ಪರಿಚಯಿಸುವ ಕಾರ್ಯ ಆಗಿಲ್ಲ’

ಇತಿಹಾಸ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಕುರಿತ ಪಾಠವನ್ನು ತೆಗೆಯುವುದಕ್ಕೂ ವಿಧಾನಸಭಾ ಉಪ ಚುನಾವಣೆಗೂ ಸಂಬಂಧವಿಲ್ಲ. ಇದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿಲ್ಲ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರು ಪಠ್ಯದಿಂದ ಟಿಪ್ಪು ಸುಲ್ತಾನ್‌ ಪಠ್ಯ ತೆಗೆದು ದೇಶಪ್ರೇಮ, ರಾಷ್ಟ್ರಭಕ್ತಿ ಮೂಡಿಸುವ ಪಠ್ಯ ಅಳವಡಿಸುವಂತೆ ಮನವಿ ಮಾಡಿರುವುದರಿಂದ ಚರ್ಚೆಯಾಗುತ್ತಿದೆ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.