ಟಿಪ್ಪು ಪಠ್ಯ ರದ್ದು: ಸಿಎಂ ಚಿಂತನೆಗೆ ಕಟೀಲು ಸಮರ್ಥನೆ
ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆಯುವ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವನ್ನು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ. ಟಿಪ್ಪು ಜಯಂತಿ ಎಂಬ ಆಚರಣೆ ಇಸ್ಲಾಂ ಧರ್ಮದಲ್ಲಿಯೇ ಇಲ್ಲ. ಆದರೂ ಹಿಂದಿನ ಸರ್ಕಾರಗಳು ಕೇವಲ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸಿ ಬಹುಸಂಖ್ಯಾತರ ಬಾವನೆಗಳಿಗೆ ನೋವುಂಟುಮಾಡಿದ್ದವು ಎಂದಿದ್ದಾರೆ.
ಉಡುಪಿ(ನ.01): ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆಯುವ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವನ್ನು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.
ಗುರುವಾರ ಇಲ್ಲಿನ ಹೆಜಮಾಡಿಯಲ್ಲಿ ಏಕತಾ ಓಟಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಟಿಪ್ಪು ಜಯಂತಿ ಎಂಬ ಆಚರಣೆ ಇಸ್ಲಾಂ ಧರ್ಮದಲ್ಲಿಯೇ ಇಲ್ಲ. ಆದರೂ ಹಿಂದಿನ ಸರ್ಕಾರಗಳು ಕೇವಲ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸಿ ಬಹುಸಂಖ್ಯಾತರ ಬಾವನೆಗಳಿಗೆ ನೋವುಂಟುಮಾಡಿದ್ದವು. ಮತಾಂಧ, ದುರಂಹಕಾರಿಯಾಗಿದ್ದ ಟಿಪ್ಪುವಿನ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದು ಸಂಸ್ಕೃತಿಯಲ್ಲ. ಹಾಗಾಗಿ ಅದನ್ನು ಪಠ್ಯದಿಂದ ತೆಗೆಯಲು ಆದೇಶಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ.
ನೆತ್ತರ ಕಥೆಯಿದೆ:
ಮಂಗಳೂರಿನ ನೆತ್ತರಕೆರೆ ಎಂಬ ಪ್ರದೇಶವು ಟಿಪ್ಪುವು ಕ್ರೈಸ್ತರನ್ನು ದಮನಿಸಿದ್ದ ನೆತ್ತರ ಕಥೆಯನ್ನು ಹೇಳುತ್ತದೆ. ಅಲ್ಪಸಂಖ್ಯಾತರಾದ ಕ್ರೈಸ್ತರೂ ಟಪ್ಪುವನ್ನು ವಿರೋಧಿಸುತ್ತಿದ್ದಾರೆ. ಆದರೆ ಹಿಂದಿನ ಸರ್ಕಾರ ಕೇವಲ ಒಂದು ವರ್ಗವನ್ನು ತೃಪ್ತಿಗಾಗಿ ಟಿಪ್ಪುವನ್ನು ವೈಭವಿಸಿತ್ತು, ಎಂದೂ ನಳಿನ್ ಹೇಳಿದರು.
ಬಿಜೆಪಿಗೆ ಅತಿ ಹೆಚ್ಚು ಸ್ಥಾನ:
ರಾಜ್ಯದಲ್ಲಿ ಕೆಲವು ನಗರಸಭೆ, ಮಹಾನಗರಪಾಲಿಕೆಗಳಿಗೆ ಚುನಾವಣೆ ನಡಿಯಲಿದೆ. ಬಿಜೆಪಿಯ ಸಿದ್ಧತೆ ಪೂರ್ಣಗೊಂಡಿದ್ದು ಅತಿ ಹೆಚ್ಚು ಸ್ಥಾನವನ್ನು ಪಡೆಯಲಿದೆ. ವಿಧಾನಸಭಾ ಉಪಚುನಾವಣೆಯಲ್ಲೂ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುತ್ತದೆ. ಪಕ್ಷದ ಸಾಂಸ್ಥಿಕ ಚುನಾವಣೆಗಳೂ ಸೂಚನೆಯಂತೆ ನ. 30ರೊಳಗಾಗಿ ಪೂರ್ತಿಗೊಳ್ಳಲಿದೆ ಎಂದು ನಳಿನ್ ಹೇಳಿದ್ದಾರೆ.
ಡಿಸೆಂಬರಿನೊಳಗೆ ರಾ.ಹೆ. ಕಾಮಗಾರಿ ಪೂರ್ಣ
ಈ ಭಾಗದ ರಾ.ಹೆ. ಕಾಮಗಾರಿಗಳ ವಿಳಂಬವಾಗಿರುವುದು ಹೌದು, ಈಗಾಗಲೇ ಸಂಸದೆ ಶೋಭಾ, ಕೇಂದ್ರ ಸಚಿವರಾದ ಸದಾನಂದ ಗೌಡ, ನಿತಿನ್ ಗಡ್ಕರಿ, ತಾನೂ ಸೇರಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು, ನವಯುಗ ಅಧಿಕಾರಿಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. ಡಿಸೆಂಬರ್ ತಿಂಗಳಾಂತ್ಯದೊಳಗಾಗಿ ಈ ಭಾಗದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದುದಾಗಿ ನವಯುಗ ನಿರ್ಮಾಣ ಕಂಪನಿ ಹೇಳಿರುವುದಾಗಿ ನಳಿನ್ ತಿಳಿಸಿದರು.