4 ಸಚಿವರು, 13 ಶಾಸಕರ ವಿರುದ್ಧ ಕಮಿಷನ್‌ ಆರೋಪ ಕಮಿಷನ್‌ ಕೇಳಿದ್ದಕ್ಕೆ ದಾಖಲೆಗಳಿವೆ ಶಿವರಾತ್ರಿ ದಿನ ಬಿಡುಗಡೆ ಸರ್ಕಾರಕ್ಕೂ ತಿಳಿಸಿದ್ದೇವೆ: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ

ಬೆಂಗಳೂರು (ಜ.17) : ನಾಲ್ವರು ಸಚಿವರು, ಹದಿಮೂರು ಶಾಸಕರು ವಿವಿಧ ಕಾಮಗಾರಿಯಲ್ಲಿ ಕಮಿಷನ್‌ ಕೇಳಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಆಡಿಯೋ ಮತ್ತು ವಿಡಿಯೋಗಳಿವೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಹೊಸ ‘ಬಾಂಬ್‌’ ಸಿಡಿಸಿದೆ. ಜೊತೆಗೆ 25 ಸಾವಿರ ಕೋಟಿ ರು. ಬಾಕಿ ಬಿಡುಗಡೆಗೆ ಆಗ್ರಹಿಸಿ ಜ.18 ರಂದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್‌, 4 ಸಚಿವರು ಮತ್ತು 13 ಶಾಸಕರು ಕಾಮಗಾರಿಯಲ್ಲಿ ಕಮಿಷನ್‌ ಕೇಳಿದ್ದಾರೆ. ಇದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಶಾಸಕರು ಯಾವುದೋ ಒಂದು ಪಕ್ಷಕ್ಕೆ ಸೇರಿಲ್ಲ. ಎಲ್ಲ ಪಕ್ಷಕ್ಕೆ ಸೇರಿದ್ದಾರೆ. ಕಮಿಷನ್‌ ಬಗ್ಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಅವರಿಗೆ ಮಾಹಿತಿ ನೀಡಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಆರೋಪಿಸಿದರು.

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಕೈ ಹಾಕಿದ ಕೆಂಪಣ್ಣ: ಮುಂದುವರೆದ ಜಟಾಪಟಿ

ನಾವು ಕಮಿಷನ್‌ ಕೊಡುವುದು ತಡವಾದಾಗ ಇದನ್ನು ಶಾಸಕರಿಗೆ ಎಂಜಿನಿಯರ್‌ ತಿಳಿಸುತ್ತಾರೆ. ಆಗ ಬಿಲ್‌ ತಡೆ ಹಿಡಿಯಲಾಗುತ್ತದೆ. ಸಾಲ ಸೋಲ ಮಾಡಿ, ಆಭರಣಗಳನ್ನು ಅಡ ಇಟ್ಟು ನಾವು ಕಮಿಷನ್‌ ನೀಡಬೇಕಾ? ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ, ಜಿಎಸ್‌ಟಿ ಗೊಂದಲ ಪರಿಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಬಾರದಿತ್ತೇ? ಆದ್ದರಿಂದ ಶಿವರಾತ್ರಿ ಹಬ್ಬದಂದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಾವಿರಾರು ಗುತ್ತಿಗೆದಾರರು ಭಾಗಿ:

ಸಂಘದ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಸರ್ಕಾರ ಗುತ್ತಿಗೆದಾರರಿಗೆ ಪಾವತಿಸಬೇಕಾದ 25 ಸಾವಿರ ಕೋಟಿ ರು. ಬಾಕಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಜ.18 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಸಾವಿರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ನಡೆಸಬೇಕೇ ಎಂಬುದನ್ನು ಬುಧವಾರ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ 4 ಸಾವಿರ ಕೋಟಿ ರು., ಬಿಬಿಎಂಪಿಯಿಂದ 3 ಸಾವಿರ ಕೋಟಿ, ಬೃಹತ್‌, ಮಧ್ಯಮ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 8 ಕೋಟಿ ಸೇರಿ ಒಟ್ಟಾರೆ 25 ಸಾವಿರ ಕೋಟಿ ರು. ಕಾಮಗಾರಿ ಬಿಲ್‌ ಬಾಕಿ ಇವೆ. ಬಿಲ್‌ ಪಾವತಿ ಮಾಡುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಸಚಿವ ಮುನಿರತ್ನ ಅವರ ಆಸ್ತಿಯ ಬಗ್ಗೆ ಲೋಕಾಯುಕ್ತದಲ್ಲಿ ಮಾಹಿತಿ ಕೇಳಿದ್ದೇವೆ. ನಾವು ಮುನಿರತ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದಲ್ಲಿ ಸತ್ಯವಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ವಕೀಲರ ಬಳಿ ಚರ್ಚಿಸಿ ಮಾತನಾಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕಮೀಷನ್‌ ಕೊಟ್ಟಿದ್ದೇನೆ: ಗುತ್ತಿಗೆದಾರ ಮಂಜುನಾಥ್ ಆರೋಪ

ನಾಳೆ ಬೆಂಗಳೂರಲ್ಲಿ ಧರಣಿ

25 ಸಾವಿರ ಕೋಟಿ ರು. ಬಾಕಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಸಾವಿರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ನಡೆಸಬೇಕೇ ಎಂಬುದನ್ನು ಅಂದೇ ನಿರ್ಧರಿಸಲಾಗುವುದು.

- ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ: ತಿಪ್ಪಾರೆಡ್ಡಿ

ಚಿತ್ರದುರ್ಗ (ಜ.17) : ಚಿತ್ರದುರ್ಗ ಶಾಸಕರಿಗೆ ಕಮಿಷನ್‌ ನೀಡಿದ್ದೇನೆ ಎಂಬ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್‌ ಆರೋಪವನ್ನು ಶಾಸಕ ತಿಪ್ಪಾರೆಡ್ಡಿ ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆತ ಯಾರಿಗೆ ದುಡ್ಡು ಕೊಟ್ಟಿದ್ದಾನೋ ಗೊತ್ತಿಲ್ಲ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾನೆ. ಜಿಲ್ಲಾಸ್ಪತ್ರೆಯ ಕೆಎಚ್‌ಎಸ್‌ಡಿಪಿ ಯೋಜನೆಯ ಟೆಂಡರ್‌ ಕೊಡಿಸದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಆರೋಪ ಮಾಡ್ತಿದ್ದಾನೆ’ ಎಂದು ಏಕವಚನದಲ್ಲಿಯೇ ಆರೋಪಿಸಿದರು.

‘ಗುತ್ತಿಗೆದಾರ ಮಂಜುನಾಥ್‌, ಅಧಿಕಾರಿಗಳಿಗೆ ನಾನು ಜಿಲ್ಲಾಧ್ಯಕ್ಷ ಅಂತ ಬೆದರಿಸುತ್ತಾನೆ. ಯಾವುದೇ ಕಾಮಗಾರಿ ಮಾಡಿದರೂ ಆತ ಹೇಳಿದ್ದೇ ಫೈನಲ್‌ ಆಗಬೇಕು. ಸಣ್ಣ, ಪುಟ್ಟಗುತ್ತಿಗೆದಾರರು ಕೆಲಸ ಕೇಳಿದಾಗ ತಾರತಮ್ಯ ಮಾಡುತ್ತಾನೆ. ಅಷ್ಟುಕೊಟ್ಟಿದ್ದೇನೆ, ಇಷ್ಟುಕೊಟ್ಟಿದ್ದೇನೆ ಅಂತ ಹೇಳಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ ಅಂತ ಗೊತ್ತಿಲ್ಲ. ಆತ ಕಾಮಗಾರಿ ಮಾಡುವ ವೇಳೆ ಯುಜಿಡಿ ಪೈಪ್‌ಲೈನ್‌ ಒಡೆದಿದ್ದ. ಅದನ್ನು ಕೇಳಿದ್ದು ತಪ್ಪಾ?. ಚಿತ್ರದುರ್ಗದ ಬಳಿ ನನ್ನದು 25 ಎಕರೆ ಜಮೀನು ಇದೆ. ರಿಯಲ್‌ ಎಸ್ಟೇಟ್‌ ವ್ಯವಹಾರವನ್ನು ನನ್ನ ಜೊತೆ ಮಾಡಿ ಎಂದು ಕೇಳಿದ್ದ. ನಾನದಕ್ಕೆ ನಿರಾಕರಿಸಿದ್ದೆ. ಅದನ್ನೇ ಮುಂದಿಟ್ಟುಕೊಂಡು ಈ ರೀತಿ ಆರೋಪ ಮಾಡ್ತಿದ್ದಾನೆ. ಆತನ ಗುಣವೇ ಹೆದರಿಸಿ, ಬೆದರಿಸಿ ಕೆಲಸ ಮಾಡೋದು’ ಎಂದು ಆರೋಪಿಸಿದರು.