ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ
ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5,000 ಕ್ಯೂಸೆಕ್ಸ್ ಕಾವೇರಿ ನೀರನ್ನು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಕರ್ನಾಟಕ್ಕೆ ಸೂಚನೆ ನೀಡಿದೆ.
ಬೆಂಗಳೂರು (ಸೆ.12): ರಾಜ್ಯದಲ್ಲಿ ಈಗಾಗಲೇ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಗೆ ನಿರ್ಮಿಸಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ನೀರಿನ ಮಟ್ಟ 21 ಸಾವಿರ ಟಿಎಂಸಿಗೆ ಕುಸಿತವಾಗಿದೆ. ಆದರೆ, ಪುನಃ ಕಾವೇರಿ ನೀರು ನಿಯಂತ್ರಣಾ ಸಮಿತಿಯ (ಸಿಡಬ್ಲ್ಯೂಆರ್‌ಸಿ) ಸಭೆಯಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5,000 ಕ್ಯೂಸೆಕ್ಸ್ ನೀರನ್ನು ಹರಿಸುವಂತೆ ಸೂಚನೆ ನೀಡಿದೆ.
ಕಾವೇರಿ ಜಲ ವಿವಾದದ ಬಗ್ಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ (cwrc) ಸಭೆಯನ್ನು ಮಾಡಲಾಗಿದೆ. ಈ ವೇಳೆ ವರ್ಚುವಲ್ ಮೂಲಕ ಕರ್ನಾಟಕ, ತಮಿಳುನಾಡು, ಅಧಿಕಾರಿಗಳು ಭಾಗಿಯಾಗಿದ್ದರು. ವರ್ಚುವಲ್ ಮೂಲಕ ಸಭೆ ನಡೆಸಿದ ಸಿಡಬ್ಲ್ಯೂಆರ್‌ಸಿ, ಕರ್ನಾಟಕದಿಂದ ಮುಂದಿನ 15 ದಿನಗಳ ಕಾಲ ತಲಾ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಈಗಾಗಲೇ ಕಾವೇರಿ ಜಲಾಶಯದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜೊತೆಗೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಮಂಡ್ಯ, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿದಾಗ್ಯೂ ಕೂಡ ಸರ್ಕಾರ ತಲಾ 5 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಿತ್ತು. ಈಗ ಪುನಃ 15 ದಿನಗಳು ತಲಾ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದ್ದು, ರಾಜ್ಯದ ಕಾವೇರಿ ಕೊಳ್ಳದ ರೈತರಿಗೆ ಬರಸಿಡಿಲು ಬಡಿದಂತಾಗಿದೆ.
ಬೆಂಗಳೂರಿನ ಅರ್ಧ ಭಾಗಕ್ಕೆ ನಾಳೆ ನೀರೂ ಇಲ್ಲ, ಕರೆಂಟೂ ಇಲ್ಲ: ನಿಮ್ಮ ಏರಿಯಾ ಇದೆನಾ ನೋಡಿ
ಸಿಡಬ್ಲ್ಯೂಆರ್‌ಸಿ ಸೂಚನೆಗೂ ಕ್ಯಾತೆ ತೆಗೆದ ತಮಿಳುನಾಡು: ಕಾವೇರಿ ನೀರು ನಿಯಂತ್ರಣಾ ಸಮಿತಿಯು 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸವಂತೆ ನೀಡಿದ ಸೂಚನೆಯು ಕರ್ನಾಟಕಕ್ಕೆ ನುಂಗಲಾರದ ತುಪ್ಪದಂತಾಗಿದೆ. ಇದರ ಮೇಲೆಯೂ ಕೂಡ ತಮಿಳುನಾಡು ತನಗೆ ಇನ್ನೂ ಹೆಚ್ಚುವರಿ ನೀರನ್ನು ಹರಿಸಬೇಕು ಎಂದು ವಾದವನ್ನು ಮಂಡಿಸಿದೆ. ಈತನಕ (ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ) ಬಾಕಿ ಇರುವ 8 ಟಿಎಂಸಿ ನೀರು ಬಿಡಬೇಕು. ಸೆಪ್ಟೆಂಬರ್ ತಿಂಗಳಲ್ಲಿ ಹರಿಸಬೇಕಾದ 36.76 ಟಿಎಂಸಿ ನೀರನ್ನು ಕೂಡ ಸಮಯಕ್ಕೆ ಸರಿಯಾಗಿ ಬಿಡಬೇಕು. ಕರ್ನಾಟಕ ನೀರು ಬಿಡುವುದು ವಿಳಂಬ ಹಿನ್ನೆಲೆಯಲ್ಲಿ ನಮ್ಮ ರೈತರ ಜೀವನ ಕಷ್ಟ ಆಗುತ್ತಿದೆ. ಸಿಡಬ್ಲ್ಯೂಎಂಎ 5 ಸಾವಿರ ಕ್ಯೂಸೆಕ್ ನೀರು ಬಿಡಲು ಹೇಳಿದ್ರೆ ನಮಗೆ 3 ರಿಂದ 3,400 ಕ್ಯೂಸೆಕ್ ನೀರು ತಲುಪುತ್ತಿದೆ ಎಂದು ಹೇಳಿದರು.
ಕಾವೇರಿ ನೀರು ಹೋರಾಟ: ಬೆಂಗಳೂರು, ಮೈಸೂರು ಜನರು ನೀರಿಲ್ಲದೇ ಪೇಪರ್ ಬಳಸುವ ಸ್ಥಿತಿ ಬರುತ್ತದೆ
ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ನಿಲ್ಲದ ಸಂಕಷ್ಟ: ಸುಪ್ರೀಂಕೋರ್ಟ್‌ಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿರುವ ಕರ್ನಾಟಕ, ಸೆಪ್ಟೆಂಬರ್ 12ರ ನಂತರ ನೀರು ಬಿಡಲು ಕಷ್ಟ ಎಂದು ಅಫಿಡವಿಟ್ ನಲ್ಲಿ ಕರ್ನಾಟಕ ಉಲ್ಲೇಖ ಮಾಡಿದೆ. ಸುಪ್ರೀಂಕೋರ್ಟ್ ನಲ್ಲಿ ಅಫಿಡೆವಿಟ್ ಸಲ್ಲಿಸಿದ್ರೂ ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆಯಿದೆ. ಸೆ.21 ನೇ ತಾರೀಖಿನಂದು ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ಅರ್ಜಿ ವಿಚಾರಣೆ ಬರಲಿದೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ CWMA ಸಭೆ ನಡೆಯೋ ಸಾಧ್ಯತೆಯಿದೆ. ಈಗ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕಕ್ಕೆ ಹಿನ್ನಡೆಯುಂಟಾದ ಬೆನ್ನಲ್ಲೇ CWMA ಸಭೆಯತ್ತ ಕರ್ನಾಟಕದ ಚಿತ್ತವನ್ನು ನೆಟ್ಟಿದೆ.