ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು, ರಾಜ್ಯಕ್ಕೆ ತೀವ್ರ ಹಿನ್ನಡೆ ಬೆನ್ನಲ್ಲೇ ಸಿಎಂ ಸಿದ್ದು ತುರ್ತು ಸಭೆ!
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ನಿತ್ಯ 5,000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ. ರಾಜ್ಯಕ್ಕೆ ತೀವ್ರ ಹಿನ್ನಡೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದಾರೆ.
ಬೆಂಗಳೂರು(ಸೆ.12) ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ತೀವ್ರಗೊಂಡಿದೆ. ಕಾವೇರಿ ನದಿ ಒಡಲು ಬತ್ತಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಸೂಚನೆಯನ್ನು ಹಲವು ಬಾರಿ ಮನವಿ ಸಲ್ಲಿಸಿದರೂ, ಕರ್ನಾಟಕದ ಪರಿಸ್ಥಿತಿಯನ್ನು ಮನವರಿಕೆ ಮಾಡುವಲ್ಲಿ ಮತ್ತೆ ರಾಜ್ಯ ಎಡವಿದೆ. ಕಾವೇರಿ ನೀರು ನಿಯಂತ್ರಣ ಮಂಡಳಿ(CWRC) ಇಂದಿನ ಸಭೆಯಲ್ಲಿ ಈ ಮಹತ್ವದ ಸೂಚನೆಯನ್ನು ಕರ್ನಾಟಕಕ್ಕೆ ನೀಡಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ತಮ್ಮಕೊಠಡಿಯಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಮಳೆ ಕೊರತೆಯಿಂದ ಕಾವೇರಿ ನದಿ ಬತ್ತಿ ಹೋಗುತ್ತಿದೆ. ಸದ್ಯ ಕೆಆರ್‌ಎಸ್ ಜಲಾಶದಲ್ಲಿ ಕೇವಲ 21 ಟಿಎಂಸಿ ನೀರು ಮಾತ್ರ ಸಂಗ್ರವಿದೆ. ಪ್ರತಿ ನಿತ್ಯ 5,000 ಕ್ಯೂಸೆಕ್ ನೀರು ಹರಿಸುವುದೇ ಇದೀಗ ಕರ್ನಾಟಕಕ್ಕೆ ಅತೀ ದೊಡ್ಡ ಹೊಡೆತವಾಗಿದೆ. ರಾಜ್ಯದ ರೈತರು ಈಗಾಗಲೇ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಕುಡಿಯು ನೀರಿನ ಸಮಸ್ಯೆ ಎದುರಾಗಲಿದೆ.
ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ
ಆದರೆ ತಮಿಳನಾಡು 5,000 ಕ್ಯೂಸೆಕ್ ನೀರಿನಿಂದ ತೃಪ್ತಿಗೊಂಡಿಲ್ಲ. ಹೆಚ್ಚುವರಿ ನೀರು ಹರಿಸಬೇಕು ಎಂದು ಪಟ್ಟು ಹಿಡಿದಿದೆ. ತಮಿಳುನಾಡಿನ ಕೆಲ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆದರೂ ತಮಿಳುನಾಡು ಸರ್ಕಾರ ಸಮರ್ಥ ವಾದ ಮಂಡಿಸಿ ನೀರಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಕರ್ನಾಟಕ ಪದೇ ಪದೇ ಎಡವಿಬೀಳುತ್ತಿದೆ.
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ ಸಿದ್ದರಾಮಯ್ಯ ಮತ್ತೆ ನಾಳೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 12:30 ಕ್ಕೆ ವಿಶೇಷ ಸಭೆ ಕರೆದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರುಗಳು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರುಗಳು ತುರ್ತು ಸಭೆಯಲ್ಲಿ ಭಾವಹಿಸಲಿದ್ದಾರೆ.
ರೈತರ ಹಿತ ರಕ್ಷಣೆಗಾಗಿ ಬಿಜೆಪಿಯಿಂದ ಶೀಘ್ರದಲ್ಲೇ ಕಾವೇರಿ ಯಾತ್ರೆ!
ಕಳೆದೊಂದು ತಿಂಗಳಿನಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರಿನಿಂದ ರಾಜ್ಯದ ಕಾವೇರಿ ಕೊಳ್ಳದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ನಡುವೆ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿರುವುದು ಅವರನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದೆ. ತೀರ್ಪು ನಿರೀಕ್ಷೆಯಲ್ಲಿದ್ದ ರೈತರಿಗೆ ವಿಚಾರಣೆ ಮುಂದೂಡಿಕೆ ಬರಸಿಡಿಲು ಬಡಿದಂತಾಗಿದೆ.