Asianet Suvarna News Asianet Suvarna News

ಸಿದ್ದು ದಾಖಲೆಯ ಬಜೆಟ್‌ ಇಂದು: ಹೊಸ ಯೋಜನೆ ಡೌಟ್‌, ಗ್ಯಾರಂಟಿಗೆ ಒತ್ತು..!

ಸಿದ್ದರಾಮಯ್ಯ ಇಂದು ಮಂಡಿಸಲಿರುವ ಬಜೆಟ್‌ ಇತಿಹಾಸವನ್ನು ಸೃಷ್ಟಿಸಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ. ಈಗಾಗಲೇ 13 ಬಜೆಟ್‌ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಅವರ ದಾಖಲೆ ಸರಿಗಟ್ಟಿರುವ ಸಿದ್ದರಾಮಯ್ಯ ಶುಕ್ರವಾರ 14ನೇ ಬಜೆಟ್‌ ಮಂಡನೆ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ.

CM Siddaramaiah will Be Present Karnataka Budget 2023-24 on July 7th grg
Author
First Published Jul 7, 2023, 4:47 AM IST

ಬೆಂಗಳೂರು(ಜು.07):  ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡ, ಎತ್ತಿನಹೊಳೆ, ಮೇಕೆದಾಟು, ಕೃಷ್ಣಾ-ಭದ್ರಾ ಮೇಲ್ದಂಡೆ, ಆಲಮಟ್ಟಿಯಂತಹ ಬೃಹತ್‌ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವ ಅನಿವಾರ್ಯತೆ, ಸಿಬ್ಬಂದಿ ವೇತನ ಹೆಚ್ಚಳ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವಂತಹ ಸಾಲು-ಸಾಲು ಸವಾಲುಗಳ ಒತ್ತಡದ ನಡುವೆ ಇಂದು(ಶುಕ್ರವಾರ) 2023-24ನೇ ಸಾಲಿನ ಬಜೆಟ್‌ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಿಯಾಗಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಮಂಡಿಸಲಿರುವ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳ ಹೊರತಾಗಿ ಯಾವುದೇ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆಯಿದ್ದರೂ, ಡೆಲಿವರಿ ಬಾಯ್‌ಗಳಂತಹ ಅಸಂಘಟಿತ ಕಾರ್ಮಿಕರಿಗೆ ಬಂಪರ್‌ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು, ಗ್ಯಾರಂಟಿ ಹೊರೆ ಸರಿದೂಗಿಸಲು ಶಾಸಕರ ಕ್ಷೇತ್ರಗಳ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಡಿತವಾಗುವ ಸಂಭವವಿದೆ. ಜತೆಗೆ ವ್ಯಾಪಾರ ಮತ್ತು ಸೇವಾ ತೆರಿಗೆ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ ಹೆಚ್ಚಳವೂ ಆಗಬಹುದು. ಜತೆಗೆ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಸಿದ್ದರಾಮಯ್ಯ ಯತ್ನಿಸಲಿದ್ದಾರೆ.

ಸಿದ್ದರಾಮಯ್ಯ ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಗೆ ಸಿಕ್ಕೀತೇ ನಿರೀಕ್ಷಿತ ಅನುದಾನ?

ಪರಿಣಾಮ, ಆದಾಯ ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಿ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಅಗತ್ಯ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಿಗಷ್ಟೇ ಸೀಮಿತವಾಗಿ ಮಿತವ್ಯಯ ಮಾಡುವ ಆಯವ್ಯಯ ಮಂಡಿಸುವುದು ನಿಚ್ಚಳ. 2023-24ನೇ ಸಾಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ 3.09 ಲಕ್ಷ ಕೋಟಿ ರು. ಬಜೆಟ್‌ ಗಾತ್ರವನ್ನು 3.33-3.35 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಬಗ್ಗೆ ಸಿದ್ದರಾಮಯ್ಯ ಈಗಾಗಲೇ ಸುಳಿವು ನೀಡಿದ್ದಾರೆ.

ದಾಖಲೆಯ 14ನೇ ಬಜೆಟ್‌:

ಸಿದ್ದರಾಮಯ್ಯ ಅವರು ಇಂದು ಮಂಡಿಸಲಿರುವ ಬಜೆಟ್‌ ಇತಿಹಾಸವನ್ನು ಸೃಷ್ಟಿಸಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ. ಈಗಾಗಲೇ 13 ಬಜೆಟ್‌ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಅವರ ದಾಖಲೆ ಸರಿಗಟ್ಟಿರುವ ಸಿದ್ದರಾಮಯ್ಯ ಶುಕ್ರವಾರ 14ನೇ ಬಜೆಟ್‌ ಮಂಡನೆ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಆದರೆ, ಈ ಐತಿಹಾಸಿಕ ಸಾಧನೆಯೂ ಸಾಲ ಸುಳಿಗೆ ಸಿಲುಕಿ ಅಧೋಗತಿಯತ್ತ ಸಾಗಿರುವ ರಾಜ್ಯದ ಆರ್ಥಿಕ ಸ್ಥಿತಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪನ್ಮೂಲಗಳ ಕ್ರೋಢೀಕರಣದಂತಹ ಪಾಟಿ ಸವಾಲನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲವನ್ನು ಹುಟ್ಟಿಹಾಕಿದೆ.

ಜನರ ಜೇಬಿಗೆ ಕೈ ಹಾಕುತ್ತಾರೆಯೇ:

ರಾಜ್ಯಕ್ಕಿರುವ ನಿರ್ದಿಷ್ಟ ಆದಾಯ ಮೂಲಗಳಿಂದ 2023-24ನೇ ಸಾಲಿನ ಬಜೆಟ್‌ಗೆ ಅಗತ್ಯವಿರುವ ಆದಾಯ ಕ್ರೋಢೀಕರಣ ಅಸಾಧ್ಯ. ಹೀಗಾಗಿ ಅನಿವಾರ್ಯವಾಗಿ ವ್ಯಾಪಾರ-ಸೇವಾ ತೆರಿಗೆ ಹೆಚ್ಚಳ, ಹೆಚ್ಚುವರಿ ಸಾಲ ಪಡೆಯುವುದು, ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳದ ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆದಾಯ ಹೆಚ್ಚಳ ಮಾಡಿಕೊಳ್ಳುವಂತಹ ಮಾರ್ಗಗಳಿಗೆ ಅನಿವಾರ್ಯವಾಗಿ ಕೈ ಹಾಕಬೇಕಾಗಿದೆ. ಇದರಿಂದ ಪರೋಕ್ಷವಾಗಿ ಸಾರ್ವಜನಿಕರಿಗೆ ಹೊರೆಯಾಗುವ ಸಾಧ್ಯತೆಯಿದೆ.

ಸರ್ಕಾರದ ಮೇಲೆ ಎಷ್ಟೇ ಒತ್ತಡ ಹೆಚ್ಚಾದರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾರ್ವಜನಿಕರಿಗೆ ಹೊರೆ ಹೊರಿಸದೆ ಬಜೆಟ್‌ ಮಂಡನೆ ಮಾಡಿದರೆ ಅದು ಸಿದ್ದರಾಮಯ್ಯ ಅವರ ಮತ್ತೊಂದು ದಾಖಲೆಯಾಗಲಿದೆ. ಏಕೆಂದರೆ, ಅನ್ನಭಾಗ್ಯ, ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮೇ, ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 60 ಸಾವಿರ ಕೋಟಿ ರು. ಬೇಕಿದೆ. ಈಗಾಗಲೇ 4 ತಿಂಗಳು ಕಳೆದಿರುವುದರಿಂದ ಪ್ರಸಕ್ತ ಸಾಲಿನಲ್ಲಿ 42,000 ಕೋಟಿ ರು. ಬೇಕಿದೆ. ಬೊಮ್ಮಾಯಿ ಅವರ ಬಜೆಟ್‌ಗೆ ಹೋಲಿಸಿದರೆ ಇಷ್ಟುಮೊತ್ತವನ್ನು ಹೆಚ್ಚುವರಿಯಾಗಿ ಹೊಂದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರತಿ ವರ್ಷ ಸಿಬ್ಬಂದಿ ವೇತನ ಹಾಗೂ ಪಿಂಚಣಿಗೆ 65,304 ಕೋಟಿ ರು. ವೆಚ್ಚವಾಗುತ್ತಿದೆ. ಇದರ ನಡುವೆ ಇದೇ ಸಾಲಿನಲ್ಲಿ 7ನೇ ವೇತನ ಆಯೋಗದ ವರದಿ ಆಧರಿಸಿ ವೇತನ ಹೆಚ್ಚಳ ಮಾಡಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚುವರಿ ಹಣ ಮೀಸಲಿಡಬೇಕಾಗಿದೆ.

ಆದಾಯ ಸಂಗ್ರಹವೇ ಸವಾಲು:

3.09 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ ಮಂಡಿಸಿರುವ ಬೊಮ್ಮಾಯಿ ಮಾರಾಟ ತೆರಿಗೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ, ವೃತ್ತಿಪರ ತೆರಿಗೆಯಿಂದ 92 ಸಾವಿರ ಕೋಟಿ ರು. ಆದಾಯ ನಿರೀಕ್ಷಿಸಿದ್ದರು. ಇದೀಗ 1 ಲಕ್ಷ ಕೋಟಿ ರು.ಗೆ ಗುರಿ ಹೆಚ್ಚಾಗುವ ಸಾಧ್ಯತೆಯಿದೆ.

ದೇವೇಗೌಡ ಪ್ರಧಾನಿ, ಎಚ್‌ಡಿಕೆ ಸಿಎಂ ಆಗಿದ್ದು ಯಾರಿಂದ? ಸದನದಲ್ಲಿ ಚರ್ಚೆ

ಅಬಕಾರಿ ತೆರಿಗೆಯಿಂದ 35,000 ಕೋಟಿ ರು. ನಿರೀಕ್ಷಿಸಿದ್ದು, ಮದ್ಯದ ದರ ಹೆಚ್ಚಳವಾಗಿರುವುದರಿಂದ ಅಬಕಾರಿ ತೆರಿಗೆ ಸ್ವಾಭಾವಿಕವಾಗಿಯೇ ಹೆಚ್ಚಾಗಲಿದೆ. ಹೀಗಾಗಿ ಪ್ರತ್ಯೇಕವಾಗಿ ಸರ್ಕಾರ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ.
ಆಸ್ತಿಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಬೊಮ್ಮಾಯಿ ಬಜೆಟ್‌ನಲ್ಲಿ 25,000 ಕೋಟಿ ರು. ನಿರೀಕ್ಷಿಸಿದ್ದು, ಅಕ್ಟೋಬರ್‌ ವೇಳೆಗೆ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಮತ್ತಷ್ಟುಹೆಚ್ಚು ಆದಾಯ ನಿರೀಕ್ಷಿಸುವ ಸಾಧ್ಯತೆಯಿದೆ. ಆರ್ಥಿಕ ಹಿನ್ನಡೆಯಿಂದ ಉದ್ಯಮಿಗಳ ವಿದ್ಯುತ್‌ ಶುಲ್ಕದ ಮೇಲಿನ ಜಿಎಸ್ಟಿಕಡಿತಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಹೇಳಲಾಗಿದೆ.

ಕೇಂದ್ರದ ಮೇಲೆ ಒತ್ತಡ ಹೇರುವ ಸಾಧ್ಯತೆ:

ಕೇಂದ್ರ ಸರ್ಕಾರದಿಂದ ಬರಬೇಕಿರುವ ಜಿಎಸ್‌ಟಿ ಪಾಲು, ಜಿಎಸ್‌ಟಿ ಬಾಕಿ, 15ನೇ ಹಣಕಾಸು ಆಯೋಗದ ಬಾಕಿ ಹಣ ಪಡೆಯಲು ಪ್ರಯತ್ನಿಸಲಿದ್ದಾರೆ. ಜತೆಗೆ ಪ್ರತಿ ಹಂತದಲ್ಲೂ ಕೇಂದ್ರದಿಂದ ಬರಬೇಕಿರುವ ಎಲ್ಲಾ ಅನುದಾನಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ.

Follow Us:
Download App:
  • android
  • ios