ತೀವ್ರ ಉಸಿರಾಟ ಸಮಸ್ಯೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುವುದು ಹಾಗೂ ಹೃದಯದಲ್ಲಿನ ಸಮಸ್ಯೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು : ತೀವ್ರ ಉಸಿರಾಟ ಸಮಸ್ಯೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುವುದು ಹಾಗೂ ಹೃದಯದಲ್ಲಿನ ಸಮಸ್ಯೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಾ.ಬಿ.ಸಿ.ಶ್ರೀನಿವಾಸ್‌ ಅವರ ನೇತೃತ್ವದ ತಂಡ ಚಿಕಿತ್ಸೆ

ಶೇಷಾದ್ರಿಪುರ ಅಪೋಲೊ ಆಸ್ಪತ್ರೆಯ ಹೃದ್ರೋಗ ವಿಭಾಗದ ಹಿರಿಯ ವೈದ್ಯರಾದ ಡಾ.ಬಿ.ಸಿ.ಶ್ರೀನಿವಾಸ್‌ ಅವರ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದ್ದು, ಪಾರ್ವತಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬಹುತೇಕ ಬುಧವಾರ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರ ಆಗಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸೋಮವಾರ ಪಾರ್ವತಿ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು (ಪಲ್ಮನರಿ ಒಡೆಮಾ) ಉಸಿರಾಟಕ್ಕೆ ಕಷ್ಟವಾಗುತ್ತಿದೆ. ಜತೆಗೆ ಎಡ ವಾಸ್ಕ್ಯುಲರ್‌ನಲ್ಲಿ ಸಮಸ್ಯೆಯಾಗಿ ಹೃದಯ ಬಡಿತದಲ್ಲಿ ವ್ಯತ್ಯಾಸವಾಗಿತ್ತು. ಈಗ ಸುಧಾರಣೆ ಕಂಡು ಬಂದಿದೆ ಎಂದು ತಿಳಿದುಬಂದಿದೆ.

ಆರೋಗ್ಯ ಸ್ಥಿರವಾಗಿದೆ-ಆಸ್ಪತ್ರೆ:

ಪಾರ್ವತಿ ಅವರಿಗೆ ಎನ್‌ಐವಿ ಮೂಲಕ ಉಸಿರಾಟ ವ್ಯವಸ್ಥೆ ಕಲ್ಪಿಸಿದ್ದು, ಮೂತ್ರವರ್ಧಕ ಹಾಗೂ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.ಚೇತರಿಕೆ ಕಂಡು ಬರುತ್ತಿದೆ

-ಯತೀಂದ್ರ 

ಈ ಬಗ್ಗೆ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಶ್ವಾಸಕೋಶದಲ್ಲಿ ನೀರು ತಂಬಿಕೊಂಡ ಕಾರಣ ತಾಯಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಹಲವು ಪರೀಕ್ಷೆ ನಡೆಸಲಾಗಿದೆ. ಚಿಕಿತ್ಸೆ ನಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ವೈದ್ಯರು ಬುಧವಾರವರೆಗೆ ಆಸ್ಪತ್ರೆಯಲ್ಲೇ ಇರಲು ತಿಳಿಸಿದ್ದಾರೆ ಎಂದು ಹೇಳಿದರು.