ಸಿಎಂ ಸಿದ್ದರಾಮಯ್ಯ ಪತ್ನಿಗೆ ಐಸಿಯುವಿನಲ್ಲಿ ಚಿಕಿತ್ಸೆ, ಪುತ್ರ ಯತೀಂದ್ರ ಮಾಹಿತಿ ನೀಡಿದ್ದಾರೆ. ಆರೋಗ್ಯ ಏರುಪೇರಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಾಯಿ ಆರೋಗ್ಯದ ಕುರಿತು ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

ಬೆಂಗಳೂರು (ನ.17) ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಪಲ್ಸ್ ರೇಟ್ ಕುಸಿತ ಸಮಸ್ಯೆಯಿಂದ ಇಂದು ಮಧ್ಯಾಹ್ನ ನಗರದ ಶೇಷಾದ್ರಿಪುರಂ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಜೊತೆಗೆ ಆಸ್ಪತ್ರೆಯಲ್ಲಿರುವ ಪುತ್ರ ಯತೀಂದ್ರ ಸಿದ್ದರಾಮಯ್ಯ ತಾಯಿ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.

ತಾಯಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು

ಶ್ವಾಸಕೋಶದಲ್ಲಿ ನೀರು ತಂಬಿಕೊಂಡ ಕಾರಣ ತಾಯಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು ಎಂದು ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಹಲವು ಪರೀಕ್ಷೆ ನಡೆಸಲಾಗಿದೆ. ವೈದ್ಯರು ನಾಳೆವರೆಗೆ ಇರಲು ಹೇಳಿದ್ದಾರೆ. ಸದ್ಯ ತಾಯಿ ಆರೋಗ್ಯ ಚೇತರಿಕೆ ಕಂಡಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಪಾರ್ವತಿ ಅವರ ಪಲ್ಸ್ ರೇಟ್ ಕೂಡ ಕುಸಿತಗೊಂಡಿತ್ತು. ಹೀಗಾಗಿ ಸಿದ್ದರಾಮಯ್ಯ ಪತ್ನಿ ಅಸ್ವಸ್ಥಗೊಂಡಿದ್ದರು.

ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ

ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಪ್ರವಾಸ ಮೊಟಕುಗೊಳಿಸಿ ದಿಢೀರ್ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಆಗಮಿಸಲಿದ್ದಾರೆ. ನಾನು ಇಲ್ಲಿಯೇ ಇರುತ್ತೇನೆ. ತಾಯಿ ಆರೋಗ್ಯ ನೋಡಿಕೊಳ್ಳುತ್ತಿದ್ದೇನೆ ಎಂದು ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಮಹತ್ವದ ಮಾತುಕತೆ, ರಾಜ್ಯಕ್ಕೆ ಬರಬೇಕಿರುವ ಅನುದಾನ, ರಾಜ್ಯದ ಯೋಜನೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೀಗ ಪತ್ನಿ ಆಸ್ಪತ್ರೆ ದಾಖಲಾಗಿರುವ ಕಾರಣ ನೇರವಾಗಿ ದೆಹಲಿಯಿಂದ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.

ಸಿದ್ದರಾಮಯ್ಯ ಪತ್ನಿ ಆರೋಗ್ಯ ವಿಚಾರಿಸಿದ ಶಾಸಕ ಶಿವಲಿಂಗೇಗೌಡ

ಸಿದ್ದರಾಮಯ್ಯ ಪತ್ನಿ ಆಸ್ಪತ್ರೆ ದಾಖಲಾಗಿರು ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಶಿವಲಿಂಗೇಗೌಡ ಅಪೋಲೋ ಆಸ್ಪತ್ರೆ ಆಗಮಿಸಿ ಪಾರ್ವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿದ್ದ ಕಾರಣ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಯತೀಂದ್ರ ಸಿದ್ದರಾಮಯ್ಯ ಬಳಿ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ವೈದ್ಯರ ಜೊತೆಗೂ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಶಿವಲಿಂಗೇಗೌಡ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯವಾಗಿದ್ದಾರೆ, ಐಸಿಯುವಿನಲ್ಲಿ ಚಿಕಿತ್ಸೆ ಕಾರಣ ಯಾರನ್ನೂ ಬಿಡುತ್ತಿಲ್ಲ. ಯತೀಂದ್ರ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ.