ರಾಮ ಮಂದಿರ ಉದ್ಘಾಟನೆಗೆ ರಜೆ ಕೊಡದ ಸಿಎಂ ಸಿದ್ದರಾಮಯ್ಯ ರಾಮ ಭಕ್ತರಲ್ಲ, ರಹೀಂ ಭಕ್ತ: ಸಂಸದ ಪ್ರತಾಪ್ ಸಿಂಹ
ರಾಮಮಂದಿರ ಉದ್ಘಾಟನೆ ಹಬ್ಬಕ್ಕೆ ರಜೆ ಕೊಡದ ಸಿಎಂ ಸಿದ್ದರಾಮಯ್ಯ ಅವರು ರಾಮನ ಭಕ್ತರಲ್ಲ, ರಹೀಮನ ಭಕ್ತರಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಿಡಿಕಾರಿದ್ದಾರೆ.
ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.21): ನನ್ನ ಹೆಸರಿನಲ್ಲೂ ರಾಮ ಇದ್ದಾನೆ, ರಾಮ ಇದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಸಿದ್ದರಾಮಯ್ಯ ರಾಮ ಭಕ್ತರಲ್ಲ, ರಹೀಂ ಭಕ್ತ ಎನ್ನುವುದು ಸಾಬೀತಾಗಿದೆ ಎಂದು ರಾಮ ಮಂದಿರ ಉದ್ಘಾಟನೆಗೆ ರಜೆ ಕೊಡದ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡಗು ಡಿಸಿಸಿ ಬ್ಯಾಂಕಿನ ಸಮಾರಂಭದಲ್ಲಿ ಭಾವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಮಭಕ್ತರ ಸರಕಾರ ಎಲ್ಲಾ ಕಡೆ ರಜೆ ನೀಡಿದೆ. ಆದರೆ, ತಮ್ಮ ಹೆಸರಿನಲ್ಲಿ ರಾಮ ಎಂದು ಇಟ್ಟುಕೊಂಡು ರಾಮನ ಬಗ್ಗೆ ಶ್ರದ್ಧೆ ಇಲ್ಲದವರು ರಜೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.
ರಾಮ ಮಂದಿರ ಉದ್ಘಾಟನೆಗೆ ರಾಜ್ಯದಲ್ಲಿ ಸರ್ಕಾರಿ ರಜೆ ಕೊಡೊಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಇಡೀ ದೇಶದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಜನತೆ ಭಕ್ತಿಭಾವದಿಂದ ಆ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ ಆಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಠೆ ಮಾಡುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ದೇಶದಾದ್ಯಂತ ಹಬ್ಬದ ವಾತವರಣ ಸೃಷ್ಟಿಯಾಗಿದೆ. ಆದರೆ, ನಮ್ಮ ರಾಜ್ಯದ ವಿವಿಧೆಡೆ ಸಂತಸದ ಬ್ಯಾನರ್ ಹಾಕುವ ವಿಚಾರದಲ್ಲೂ ಕೆಲವೆಡೆ ಸಮಸ್ಯೆ ಮಾಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಎಲ್ಲಾ ಕಡೆ ಬ್ಯಾನರ್ ಹಾಕಲು ಅವಕಾಶ ಕೊಡಬೇಕು ಅಂತ ಪೊಲೀಸರಿಗೂ ನಾನು ಹೇಳಿದ್ದೇನೆ. ಇದೊಂದು ರಾಷ್ಟ್ರೀಯ ಹಬ್ಬ, ಎಲ್ಲರೂ ಉತ್ಸುಕತೆಯಿಂದ ಭಾಗಿಯಾಗುತ್ತಿದ್ದಾರೆ. ರಾಮನ ಮೂರ್ತಿಯನ್ನ ಕೆತ್ತಲು ಕಲ್ಲು ತೆಗೆದ ಜಾಗದಲ್ಲೂ ನಾಳೆ ವಿಶೇಷ ಪೂಜೆ ನಡೆಸಲಾಗುವುದು. ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಜಿ.ಟಿ. ದೇವೆಗೌಡರು ತಿರ್ಮಾನ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕೆ ಜೀವನಾಧಾರದ ಜಮೀನು ಬಿಟ್ಟುಕೊಟ್ಟ ದಲಿತ ರಾಮದಾಸ
ದೇಶದಲ್ಲಿ 400 ವರ್ಷಗಳ ಸುದೀರ್ಘ ಹೋರಾಟ, ಪ್ರಾಣ ತ್ಯಾಗದ ಪ್ರತಿಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗಿದೆ. ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವುದರಿಂದ ನಾಳೆ ರಾಮಭಕ್ತರು ಅಧಿಕಾರಿ ಮಾಡುತ್ತಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರ್ಕಾರ ರಜೆ ಘೋಷಿಸಿದೆ. ಆದರೆ ರಾಜ್ಯದಲ್ಲಿ ರಜೆ ನೀಡಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮನಿದ್ದರೂ ಅವರು ರಹೀಂ ಭಕ್ತರು ಎಂದು ಲೇವಡಿ ಮಾಡಿದರು.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರು, ಅಸಂಖ್ಯಾತ ಸಾಧು ಸಂತರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಕನ್ನಡ ನಾಡಿನ ಜನತೆ ನಾಳೆ ನಿಮ್ಮ ಮನೆಗಳಲ್ಲಿ ಐದು ದೀಪ ಹಚ್ಚಿ, ಅವುಗಳನ್ನು ಉತ್ತರ ದಿಕ್ಕಿನತ್ತ ಇಟ್ಟು ಪೂಜೆ ಸಲ್ಲಿಸಿ. ಮನೆಯಲ್ಲಿ ರಾಮನ ಜಪ ಮಾಡಿ ಈ ದೇಶಕ್ಕೆ ಒಳ್ಳೆಯದಾಗುತ್ತದೆ. ರಾಮಮಂದಿರ ನಿರ್ಮಾಣವಾಗಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವುದು ನಮ್ಮ ಹೆಮ್ಮೆಯ ವಿಚಾರ ಎಂದರು.