Asianet Suvarna News Asianet Suvarna News

ರೈತರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಖಡಕ್‌ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ!

ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಯಾರಿಬ್ಬರೂ ರೈತರ ಬಗ್ಗೆ ಹಗುರವಾಗಿ ಮಾತನಾಡದಂತೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದ್ದಾರೆ.

CM Siddaramaiah warned to controversial statement given Minister Shivanand Patil sat
Author
First Published Dec 26, 2023, 6:38 PM IST

ಬೆಂಗಳೂರು (ಡಿ.26): ರಾಜ್ಯದಲ್ಲಿ ನದಿ ನೀರು ಉಚಿತ, ವಿದ್ಯುತ್ ಕೂಡ ಉಚಿತ ಕೊಡಲಾಗಿದ್ದು, ಬೀಜ ಗೊಬ್ಬರವನ್ನೂ ಕೊಡಲಾಗಿದೆ. ಆದರೆ, ರೈತರು ಬರಗಾಲ ಬೀಳುವುದನ್ನೇ ಕಾಯುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ಅವರು, 'ಅನ್ನದಾತರಾದ ರೈತರ ಬಗ್ಗೆ ನಾವು ಎಚ್ಚರಿಕೆಯಿಂದ ಮಾತ್ರವಲ್ಲ ಗೌರವದಿಂದ ಮಾತನಾಡಬೇಕು. ಹಗುರ ಮಾತುಗಳ ಮೂಲಕ ರೈತರಿಗೆ ಅವಮಾನವಾಗುವಂತೆ ಮಾಡಬಾರದು. ಇದು ಪ್ರತಿಯೊಬ್ಬರು ಕಡ್ಡಾಯವಾಗಿ ಅನುಸರಿಸಿಕೊಂಡು ಬರಬೇಕಾದ ನೀತಿ ಸಂಹಿತೆ. ರೈತ ಕುಟುಂಬದಿಂದ ಬಂದಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ರೈತರನ್ನು ಅವಮಾನಿಸಬೇಕೆಂಬ ದುರುದ್ದೇಶ ಖಂಡಿತ ಇರಲಾರದು. ತನ್ನ ಜೊತೆಗಿದ್ದ ರೈತರೊಂದಿಗಿನ ಸಲಿಗೆಯಿಂದ ಕೆಲವು ಮಾತುಗಳನ್ನು ಆಡಿದ್ದಾರೆ. ಆದರೆ ಇದು ಸಮಸ್ತ ರೈತ ಸಮುದಾಯಕ್ಕೆ ಅನ್ವಯಮಾಡುವಾಗ ವಿಪರೀತ ಅರ್ಥಕ್ಕೆ ಕಾರಣವಾಗುತ್ತದೆ. ಇದು ಸಲ್ಲದು.

ರಜನಿಕಾಂತ್ ಪತ್ನಿಗೆ ಬೆಂಗಳೂರು ಕೋರ್ಟ್‌ನಿಂದ ಜಾಮೀನು ಮಂಜೂರು: ಲತಾ ರಜನೀಕಾಂತ್‌ಗೆ ಬಿಗ್‌ ರಿಲ್ಯಾಕ್ಸ್!

ರೈತರ ಕಲ್ಯಾಣಕ್ಕಾಗಿ ಕಿಂಚಿತ್ತೂ ಕೆಲಸ ಮಾಡದೆ ಇರುವ, ಮೂಲತ: ರೈತ ವಿರೋಧಿಯಾಗಿರುವ ಬಿಜೆಪಿಯ ನಾಯಕರು ಇಂತಹದ್ದೇ ಅವಕಾಶಕ್ಕಾಗಿ ಕಾದು ಕೂತವರಂತೆ ಶಿವಾನಂದ ಪಾಟೀಲರ ಮಾತುಗಳನ್ನು ವಿವಾದವನ್ನಾಗಿ ಮಾಡಿದ್ದಾರೆ. ಬೀಜ-ಗೊಬ್ಬರ ಕೊಡಿ ಎಂದು ಕೇಳಿದ ರೈತರನ್ನು ಗುಂಡಿಕ್ಕಿ ಸಾಯಿಸಿದ ಮತ್ತು ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನೋಟ್ ಪ್ರಿಂಟಿಂಗ್ ಮೆಷಿನ್ ಇದೆಯೇ ಎಂದು ಕೇಳಿದ ಬಿಜೆಪಿ  ನಾಯಕರಿಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದ್ದಾರೆ.

ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ರೈತರ ಕಲ್ಯಾಣಕ್ಕಾಗಿ ಏನು ಮಾಡಿದ್ದಾರೆ? ನಾವು ನಿಜವಾದ ರೈತ ಮಿತ್ರರು, ಬಿಜೆಪಿಯವರಂತೆ ನಕಲಿ ಮಿತ್ರರಲ್ಲ. ರೈತರ ಬಗೆಗಿನ ನಮ್ಮ ಪ್ರೀತಿ-ಅಭಿಮಾನಕ್ಕೆ ನಮ್ಮ ಸರ್ಕಾರದ  ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಜಾರಿಗೆ ತಂದಿರುವ ರೈತ ಪರ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

  • ರಾಜ್ಯದಲ್ಲಿ ಬರಗಾಲದಿಂದ ನೊಂದಿರುವ ರೈತರಿಗೆ ಕೇಂದ್ರ ಸರ್ಕಾರ ಬಿಡಿಗಾಸಿನ ಪರಿಹಾರ ನೀಡದಿದ್ದರೂ ನಾವು ಪ್ರತಿ ರೈತ ಕುಟುಂಬಗಳಿಗೆ 2,000 ರೂ. ನೀಡಿದ್ದೇವೆ. 
  • ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಾಧಿ ಮತ್ತು ದೀರ್ಘಾವಧಿ ಸಾಲಗಳ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದ್ದೇವೆ.
  • ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಚಾಲನೆ ನೀಡಿದ್ದೇವೆ. 
  • ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ನೀಡುತ್ತಿದ್ದೇವೆ.
  • 15 ವರ್ಷ ಸಾಗುವಳಿ ಮಾಡಿದ ಬಗರ್ ಹುಕುಂ ಭೂಮಿಗಳ ಸಕ್ರಮ ಗೊಳಿಸಲು ತೀರ್ಮಾನಿಸಿದ್ದೇವೆ. 
  • ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ 4 ಲಕ್ಷ ಕೃಷಿ ಪಂಪ್ ಸೆಟ್ ಗಳ ಸಕ್ರಮ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ.
  • ಕೃಷಿಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 100 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲಾಗುತ್ತಿದೆ.

ಕೋಲಾರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ: 17 ವರ್ಷದ ಮಗಳನ್ನು ಕೊಲೆಗೈದು ಸುಟ್ಟು ಹಾಕಿದ ಅಪ್ಪ!

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ದೇಶಾದ್ಯಂತ ರೈತರು ಒತ್ತಾಯಿಸುತ್ತಿದ್ದರೆ, ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ರೈತರ ಕತ್ತು ಹಿಸುಕಿ ಸಾಯಿಸುವ ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಏನೆಲ್ಲ ಕಸರತ್ತು ನಡೆಸಿತ್ತು ಎನ್ನುವುದನ್ನು ಇಡೀ ದೇಶ ಕಂಡಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಧಣಿಗಳಿಗೆ ಒತ್ತೆ ಇಡುವ ಬಿಜೆಪಿಯ ಹುನ್ನಾರವನ್ನು ದೇಶದ ರೈತರು ಅರ್ಥಮಾಡಿಕೊಂಡಿದ್ದಾರೆ. ತಮ್ಮ ರೈತ ವಿರೋಧಿ ಕೃತ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಬಿಜೆಪಿ ನಾಯಕರು ಆಗಾಗ ತಿರುಚಿದ ಹೇಳಿಕೆಗಳನ್ನು ಹಿಡ್ಕೊಂಡು ಎದೆ ಬಡಿದುಕೊಳ್ಳುತ್ತಾ ಇರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios