ಮಹಿಳೆಯರ ಉಚಿತ ಬಸ್ ಪ್ರಯಾಣದ ಯೋಜನೆ ರದ್ದಾಗದು, ಸುಳ್ಳುಸುದ್ದಿ ನಂಬಬೇಡಿ-ಸಿದ್ದು, ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿಯಿಂದಲೂ ಸ್ಪಷ್ಟನೆ
ಬೆಂಗಳೂರು(ಆ.17): ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದು, ಸುಳ್ಳು ಸುದ್ದಿಗಳನ್ನು ನಂಬದಂತೆ ಜನರಿಗೆ ಕೋರಿದ್ದಾರೆ.
ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಕುರಿತಂತೆ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮೊದಲಿಗೆ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಆ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆ ಬಸ್‌ಗಳಿಗೆ 2,000 ಖಾಸಗಿ ಡ್ರೈವರ್‌ಗಳ ನೇಮಕ: ರಸ್ತೆಗಿಳಿಯಲಿವೆ ದುರಸ್ತಿಗೊಂಡ 500 ಬಸ್‌ಗಳು
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂದು ಒಂದು ರಾಜಕೀಯ ಪಕ್ಷ ಸುಳ್ಳು ಹರಡುತ್ತಿದೆ. ಯೋಜನೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದ ಪ್ರತಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಈ ಐದು ವರ್ಷ ಮಾತ್ರವಲ್ಲ ಇನ್ನೂ ಹತ್ತು ವರ್ಷ ಶಕ್ತಿ ಯೋಜನೆ ಮುಂದುವರೆಯಲಿದೆ ಎಂದು ಹೇಳಿದರು.
ಯೋಜನೆಯ ಲಾಭ ಪಡೆಯಲು ಸದ್ಯಕ್ಕೆ ಯಾರೂ ಪಾಸ್ ಪಡೆಯುವ ಅಗತ್ಯವೂ ಇಲ್ಲ. ಮುಂದೆಯೂ (2028) ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಮುಂದಿನ 10 ವರ್ಷ ಮಹಿಳೆಯರು ರಾಜ್ಯಾದ್ಯಂತ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇದರಲ್ಲಿ ಯಾವುದೇ ಗೊಂದಲಗಳು ಬೇಕಿಲ್ಲ ಎಂದು ಸ್ಪಷ್ಪಪಡಿಸಿದರು.
Haveri: ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!
ಸುಳ್ಳು ಸಂದೇಶ ನಂಬಬೇಡಿ:
ಈ ಬಗ್ಗೆ ಸಾರಿಗೆ ಇಲಾಖೆಯು ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗೊಂದಲಕಾರಿ ಸಂದೇಶಗಳನ್ನು ನಂಬಬಾರದು. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಎಂದಿನಂತೆಯೇ ಮುಂದುವರೆಯಲಿದೆ ಎಂದು ಹೇಳಿದೆ.
900 ಕೋಟಿ ರು. ದಾಟಿದ ಶಕ್ತಿ ಟಿಕೆಟ್ ಮೌಲ್ಯ
ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಸರಾಸರಿ 60 ಲಕ್ಷ ತಲುಪಿದೆ. ಅದರ ಜತೆಗೆ ನಿತ್ಯ ಟಿಕೆಟ್ ಮೌಲ್ಯ 16 ಕೋಟಿ ರು. ದಾಟುತ್ತಿದೆ. ಅದರಂತೆ ಆಗಸ್ಟ್ 14ರವರೆಗೆ ಒಟ್ಟು 39.36 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಲಾಭ ಪಡೆದಿದ್ದು, ಅವರು ಪ್ರಯಾಣಿಸಿದ ಟಿಕೆಟ್ ಮೌಲ್ಯ 916.18 ಕೋಟಿ ರು.ಗಳಾಗಿದೆ.
