ಕೆಎಸ್‌ಆರ್‌ಟಿಸಿ ಕಂಡಕ್ಟರ್ ಸೈಕಲ್ ಟೈರ್‌ಗೂ ಸೇರಿಸಿಕೊಂಡು ಟಿಕೆಟ್ ನೀಡಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ರಾಣಿಬೇನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ. 

ಹಾವೇರಿ (ಆ.04): ಕೆಎಸ್‌ಆರ್‌ಟಿಸಿ ಕಂಡಕ್ಟರ್ ಸೈಕಲ್ ಟೈರ್‌ಗೂ ಸೇರಿಸಿಕೊಂಡು ಟಿಕೆಟ್ ನೀಡಿದ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ರಾಣಿಬೇನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಗನೊಂದಿಗೆ ಉಮೇಶ್ ಪಾಟೀಲ್ ರಾಣೇಬೆನ್ನೂರಿಂದ ಊರಿಗೆ ಮರಳಿ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಹೊರಟಿದ್ದರು. ತಂದೆ ಮತ್ತು ಮಗನ ಎರಡು ಟಿಕೆಟ್ 70 ರೂ. ನೀಡಿದ್ದು, ಸೈಕಲ್ ಟೈರ್‌ಗೆ 5 ರೂ. ಹೆಚ್ಚಿನ ಹಣ ಪಡೆದು ಟಿಕೆಟ್ ನೀಡಿದ್ದಾರೆ. ಒಬ್ಬರಿಗೆ 35 ರೂ. ಟಿಕೆಟ್ ದರ ಇದ್ದು, ಇಬ್ಬರಿಗೆ 70 ರ ಬದಲು ಸೈಕಲ್ ಟೈರ್‌ಗೆ 5 ರೂ ಹೆಚ್ಚು ಪಡೆದಿದ್ದಕ್ಕೆ ಪ್ರಯಾಣಿಕ ಕಂಗಾಲಾಗಿದ್ದಾನೆ. 

ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಲು ಒತ್ತಾಯ: ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸಲು ಹಾಗೂ ನಗರ ಸಾರಿಗೆ ಪ್ರಾರಂಭಿಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ನಗರದ ಬಸ್‌ ನಿಲ್ದಾಣ ಬಂದ್‌ ಮಾಡಿ ಪ್ರತಿಭಟನೆ ಮಾಡಿದರು. ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್‌. ಮಾತನಾಡಿ, ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕಾಗಿ ಹಾಗೂ ವ್ಯಾಪಾರ ವಹಿವಾಟು ಮಾಡಲು ಬರುತ್ತಾರೆ. 

ಡಿಸಿಎಂ ಸ್ವಕ್ಷೇ​ತ್ರ​ದಲ್ಲಿ ಸಾರಿಗೆ ಬಸ್ಸಿ​ನ ಅವ್ಯ​ವಸ್ಥೆ ಖಂಡಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ಥ!

ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಬಸ್‌ನ ಅನಾನುಕೂಲ ವಿಪರೀತವಾಗಿದ್ದು, ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪ್ರತಿಭಟನೆ ಮಾಡಿ ಮನವಿ ಮಾಡಿದರೂ ಈವರೆಗೆ ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿದರು. ಜಿಲ್ಲಾ ಕೇಂದ್ರವಾಗಿ 25 ವರ್ಷ ಕಳೆದರೂ ಮೂಲಭೂತ ಸೌಕರ್ಯಗಳಿಂದ ಜಿಲ್ಲಾ ಕೇಂದ್ರ ನರಳುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈವರೆಗೂ ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. 

ಗ್ರಾಮೀಣ ಭಾಗದಿಂದ ಬಂದು ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣದಿಂದ ಸುಮಾರು ಐದಾರು ಕಿಮೀ ದೂರದ ಶಾಲಾ-ಕಾಲೇಜು, ಹಾಸ್ಟೆಲ್‌, ಸರ್ಕಾರಿ ಕಚೇರಿಗಳಿಗೆ ತೆರಳಲು ತೊಂದರೆ ಆಗುತ್ತಿದೆ ಎಂದರು. ವಿದ್ಯಾರ್ಥಿಗಳ ಹಾಗೂ ಹಾವೇರಿಯ ಜನತೆ ಮನವಿಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಶಕ್ತಿ ಯೋಜನೆಯ ನಂತರ ಸ್ಥಳೀಯ ಬಸ್‌ಗಳನ್ನು ನಾನ್‌ ಸ್ಟಾಪ್‌ ಸಂಚರಿಸಲು ಬಿಟ್ಟು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಬಸ್‌ನ ಅಭಾವ ಸೃಷ್ಟಿಮಾಡುತ್ತಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿಗಳು ಸಿಂಗಾ​ಪು​ರ​ದಲ್ಲಿ ಕುಳಿ​ತ​ವರ ತಲೆ ಕೆಡಿಸ್ತಿವೆ: ಎಚ್‌ಡಿಕೆಗೆ ಶಾಸಕ ಬಾಲ​ಕೃಷ್ಣ ಟಾಂಗ್‌

ವಿದ್ಯಾರ್ಥಿನಿ ರಮ್ಯಾ ಮಾತನಾಡಿ, ವಿದ್ಯಾರ್ಥಿನಿಯರು ಎನ್ನದೇ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾನವೀಯತೆ ತೋರದೆ ಬಸ್‌ಗಳನ್ನು ನಿಲ್ಲಸದೆ ಹೋಗುತ್ತಾರೆ. ಕುರಿಗಳ ಹಿಂಡು ತುಂಬಿದಂತೆ ಬಸ್‌ಗಳಲ್ಲಿ ವಿದ್ಯಾರ್ಥಿನಿಯರನ್ನು ತುಂಬುತ್ತಾರೆ. ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯವಿಲ್ಲದೆ ದಿನನಿತ್ಯ ತರಗತಿಗಳಿಗೆ ತಡವಾಗಿ ಹೋಗಿ ಅಭ್ಯಾಸದ ಕುಂಠಿತವಾಗುತ್ತಿದೆ. ದಿನನಿತ್ಯ ಐದಾರು ಕಿಮೀ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಎಂ.ಎಸ್‌. ಪಾಟೀಲ ಕೆಎಸ್‌ಆರ್‌ಟಿಸಿ ಡಿಟಿಒ ಅಧಿಕಾರಿ ಅಶೋಕ ಅವರನ್ನು ಕರೆಸಿದರು. ಆ.9ರಿಂದ ನಗರ ಸಾರಿಗೆ ಬಸ್‌ ಬಿಡಲು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಡಿವೈಎಸ್ಪಿ ನೇತೃತ್ವದಲ್ಲಿ ಎಸ್‌ಎಫ್‌ಐ ಸಂಘಟನೆ ಜೊತೆಗೆ ಸಭೆ ನಡೆಸಲು ಒಪ್ಪಿಕೊಂಡ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.