ಚುನಾವಣೆ ವೇಳೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸಲು ಬದ್ಧರಾಗಿದ್ದು, ಒಂದೇ ಬಾರಿ ಭರ್ತಿ ಅಸಾಧ್ಯ. ಒಟ್ಟು 7.72 ಲಕ್ಷ ಹುದ್ದೆ ಮಂಜೂರಿಯಾಗಿದ್ದು, 5.16 ಲಕ್ಷ ಭರ್ತಿ ಮಾಡಲಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

ವಿಧಾನ ಪರಿಷತ್(ಜು.07): ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಿಸುವ ಸಂಬಂಧ ರಚಿಸಲಾದ 7ನೇ ವೇತನ ಆಯೋಗ ಸಲ್ಲಿಸುವ ಶಿಫಾರಸುಗಳನ್ನು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬೆಳಕಿನಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

ಬಿಜೆಪಿ ಡಾ.ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವರದಿ ನೀಡಲು ಆರು ತಿಂಗಳು ಹೆಚ್ಚಿನ ಕಾಲಾವಕಾಶ ಕೇಳಿದೆ. ಹಾಗಾಗಿ ಆಯೋಗ ನೀಡುವ ಅಂತಿಮ ವರದಿ ಬಂದ ಮೇಲೆ ಪರಿಶೀಲಿಸಿ ರಾಜ್ಯದ ಆರ್ಥಿಕ ಸ್ಥಿತಿ ನೋಡಿಕೊಂಡು ಸರ್ಕಾರ ಕ್ರಮ ಜರುಗಿಸಲಿದೆ. ಈಗಾಗಲೇ ಆಯೋಗದ ಮಧ್ಯಂತರ ವರದಿ ಅನ್ವಯ ಶೇ.17ರಷ್ಟು ಪರಿಹಾರ ನೀಡಲಾಗಿದೆ ಎಂದರು.

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ

2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ:

ರಾಜ್ಯದಲ್ಲಿ ವಿವಿಧ ಇಲಾಖೆಯಲ್ಲಿ 2,55,920 ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಚುನಾವಣೆ ವೇಳೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸಲು ಬದ್ಧರಾಗಿದ್ದು, ಒಂದೇ ಬಾರಿ ಭರ್ತಿ ಅಸಾಧ್ಯ. ಒಟ್ಟು 7.72 ಲಕ್ಷ ಹುದ್ದೆ ಮಂಜೂರಿಯಾಗಿದ್ದು, 5.16 ಲಕ್ಷ ಭರ್ತಿ ಮಾಡಲಾಗಿದೆ ಎಂದರು.

ಸರಾಸರಿ ಶೇ.33ರಷ್ಟು ಹುದ್ದೆಗಳು ಖಾಲಿ ಇವೆ. ಇಷ್ಟೊಂದು ಹುದ್ದೆಗಳು ಖಾಲಿ ಇದ್ದರೂ ಸಿ ಮತ್ತು ಡಿ ವೃಂದಕ್ಕೆ 75,474 ಜನರನ್ನು ಹೊರಗುತ್ತಿಗೆ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಬೇರೆ ಬೇರೆಯಾಗಿರುತ್ತದೆ. ಕೇಂದ್ರ ಸರ್ಕಾರ 10 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಿದರೆ ರಾಜ್ಯದಲ್ಲಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುವುದು. ಕೆಲವೊಂದು ಸಂದರ್ಭದಲ್ಲಿ 6 ಇಲ್ಲವೇ 7 ವರ್ಷಕ್ಕೆ ಮಾಡಿದ ಪ್ರಸಂಗ ಇದೆ. ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ರೀತಿ ವ್ಯವಸ್ಥೆ ಇರುತ್ತದೆ ಎಂದರು.